ಶ್ರೀಮಂಗಲ, ಡಿ. 4: ದಕ್ಷಿಣ ಕೊಡಗಿನ ಟೆ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ನೆಮ್ಮಲೆ ಗ್ರಾಮದ ಇತಿಹಾಸ ಪ್ರಸಿದ್ಧ ಕೋಲ್ ಮಂದ್‍ನಲ್ಲಿ ಮಂದ್ ನಮ್ಮೆ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಅಪರಾಹ್ನ 3 ಗಂಟೆಗೆ ತಕ್ಕಮುಖ್ಯಸ್ಥರ ಮನೆಯಿಂದ ಕೊಂಬ್ ಕೊಟ್ಟ್, ದುಡಿಕೊಟ್ಟ್‍ಪಾಟ್ ಸಮೇತ ತಳಿಯತಕ್ಕಿ ಬೊಳ್‍ಚದೊಂದಿಗೆ ಗ್ರಾಮದ ಜನರು ಮೆರವಣಿಗೆಯಲ್ಲಿ ಕೋಲ್ ಮಂದ್‍ಗೆ ಬಂದು ಅರಳಿಕಟ್ಟೆಯ ಸುತ್ತ ಪುತ್ತರಿ ಕೋಲ್ ಆಡುವುದರೊಂದಿಗೆ ಆರಂಭವಾದ ಮಂದ್ ನಮ್ಮೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭ ಗ್ರಾಮಸ್ಥರು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ್ದು ಮಂದ್ ನಮ್ಮೆಗೆ ಮೆರುಗು ತಂದಿತು. ಕಾರ್ಯಕ್ರಮದಲ್ಲಿ ಬಾಲಕರಿಂದ ಬೊಳಕಾಟ್, ಪುತ್ತರಿ ಕೋಲಾಟ್, ಕತ್ತಿಯಾಟ್, ಪರೆಯಕಳಿ, ವಾಲಗತಾಟ್ ಪ್ರದರ್ಶನವು ಜನರ ಮೆಚ್ಚುಗೆ ಪಡೆಯಿತು. ಇದರೊಂದಿಗೆ ಕೊಡವ ಹಾಡು ಕೇಳುಗರನ್ನು ರಂಜಿಸಿತು. ನೆಮ್ಮಲೆ ಗ್ರಾಮ ಸಮಿತಿಯ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸ್‍ವಿಶ್ವನಾಥ್, ತಕ್ಕಮುಖ್ಯಸ್ಥರು ಹಾಗೂ ಗ್ರಾಮ ಸಮಿತಿ ಸದಸ್ಯರು ಮುಂದಾಳತ್ವ ವಹಿಸಿದ್ದರು.