ಮಡಿಕೇರಿ, ಡಿ.4 : ಕಾಂಗ್ರೆಸ್ ಕಡೆ ಮುಖ ಮಾಡಿರುವ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ನೇರವಾಗಿ ಜೆಡಿಎಸ್ ತೊರೆಯದೆ ವಿನಾಕಾರಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧತೆ ನಡೆಸಿರುವ ಜೀವಿಜಯ ಅವರು ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ತರುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು. ತಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ ಕಾಂಗ್ರೆಸ್ ಕಡೆಗೆ ಮುಖ ಮಾಡಿರುವ ಜೀವಿಜಯರಿಂದ ಆ ಪಕ್ಷಕ್ಕೆ ನಷ್ಟವೇ ಹೊರತು ಲಾಭವೇನಿಲ್ಲ, ಅದೇ ರೀತಿ ಕಾಂಗ್ರೆಸ್ ಪಕ್ಷ ಜೀವಿಜಯ ಅವರಿಗೆ ಮೋಸ ಮಾಡಲೆಂದೇ ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷ ಬಿಜೆಪಿ ಸ್ನೇಹ ಮಾಡಿದೆ, ಆ ಕಾರಣಕ್ಕಾಗಿ ನಾನು ಪಕ್ಷ ಬಿಡುತ್ತಿದ್ದೇನೆ ಎಂದು ಜೀವಿಜಯ ಅವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಜೆಡಿಎಸ್ ಜಾತ್ಯತೀತ ನಿಲುವಿನ ಪ್ರಾದೇಶಿಕ ಪಕ್ಷವಾಗಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ನ “ಬಿ” ಟೀಮ್ ಅಲ್ಲವೆಂದು ಸ್ಪಷ್ಟಪಡಿಸಿದರು.

ಸುಮಾರು 14 ತಿಂಗಳುಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಮಾಡಿದ ಕುಮಾರಸ್ವಾಮಿ ಅವರ ಸೇವೆಯನ್ನು ಕೊಡಗಿನ ಜನ ಎಂದಿಗೂ ಮರೆಯುವುದಿಲ್ಲ. ಕುಮಾರಸ್ವಾಮಿ ಅವರ ಘನತೆ ಏನು ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ. ಜೀವಿಜಯ ಅವರ ಅಪಪ್ರಚಾರದಿಂದ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಅವರು ತಿಳಿಸಿದರು.

ಕುಶಾಲನಗರ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಜೆಡಿಎಸ್ ನಾಯಕರು ಬಿಜೆಪಿ ಪರ ಇದ್ದರು ಎಂದು ಜೀವಿಜಯ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸ್ವತಃ ಜೀವಿಜಯ ಅವರೇ ತಮ್ಮ ಮನೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ನೀಡಿದ ಸಲಹೆಯ ವೀಡಿಯೋ ದೃಶ್ಯಾವಳಿ ನಮ್ಮ ಬಳಿ ಇದ್ದು, ಸಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು. ಜೆಡಿಎಸ್ ತೊರೆಯುವವರೆಲ್ಲ ತೊರೆಯಲಿ, ಆದರೆ ಪಕ್ಷದಲ್ಲಿದ್ದುಕೊಂಡೇ ವಿರುದ್ಧ ಕೆಲಸ ಮಾಡಿದರೆ ಅವರು ಯಾರೇ ಆಗಿದ್ದರೂ ಅಮಾನತು ಮಾಡುವುದಾಗಿ ಗಣೇಶ್ ಎಚ್ಚರಿಕೆ ನೀಡಿದರು.

ಗ್ರಾ.ಪಂ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿದೆ. ಚುನಾವಣೆಯಲ್ಲಿ 101 ಪಂಚಾಯಿತಿಗಳ ಪೈಕಿ ಸುಮಾರು 40 ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರಕ್ಕೆ ಬರಲಿದ್ದಾರೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಸುರೇಶ್ ಹಾಗೂ ಹಿರಿಯ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎ.ಯೂಸುಫ್, ಪ್ರಧಾನ ಕಾರ್ಯದರ್ಶಿ ಮುಳ್ಳುಸೋಗೆ ರಾಜೇಶ್ ಹಾಗೂ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಜಿ.ವಿಜಯ ಉಪಸ್ಥಿತರಿದ್ದರು.