ಸಿದ್ದಾಪುರ, ಡಿ. 4: ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿ ನಿವಾಸಿ ಸುಬ್ರಮಣಿ ತನ್ನ ಪದವಿ ವ್ಯಾಸಂಗದ ನಂತರ ಭಾರತದ ಪ್ರತಿಷ್ಠಿತ ಕಾರು ಉತ್ಪಾದನಾ ಕಂಪೆನಿಯ ತಮಿಳುನಾಡು ಶಾಖೆಯಲ್ಲಿ ಗುಣಮಟ್ಟ ಪರಿಶೋಧಕನಾಗಿ ಕೆಲಸ ಗಿಟ್ಟಿಸುತ್ತಾನೆ. ತದನಂತರ ಮಡಿಕೇರಿಯ ಮೋಟರ್ಸ್ ಸಂಸ್ಥೆಯಲ್ಲಿ ಟೆಕ್ನೀಷನ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಲಾಕ್‍ಡೌನ್‍ನಲ್ಲಿ ಕೆಲಸ ಕಳೆದು ಕೊಂಡಿದ್ದರು. ಕೆಲಸ ಕಳೆದು ಕೊಂಡಿದ್ದರೂ ಧೃತಿಗೆಡದೆ ಸುಬ್ರಮಣಿ ಇದೀಗ ಕುಕ್ಕುಟೋದ್ಯಮದ ಮೂಲಕ ಸ್ವ ಉದ್ಯೋಗದಲ್ಲಿ ಕೈತುಂಬಾ ದುಡಿಯುತ್ತಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ.

ಯುವಕನಿಗೆ ಲಕ್ ಆದ ಲಾಕ್‍ಡೌನ್: ಕಳೆದ ಮಾರ್ಚ್ ತಿಂಗಳಿ ನಿಂದ ಕೊರೊನಾ ವೈರಸ್ ಜಿಲ್ಲೆಯನ್ನು ಸಂಪೂರ್ಣ ಸ್ತಬ್ದವಾಗಿಸಿತ್ತು. ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು, ಶಾಲಾ -ಕಾಲೇಜು, ರೆಸಾರ್ಟ್ ಇನ್ನಿತರ ಉದ್ಯಮಗಳು, ಬೈಕ್, ಕಾರು ಷೋ ರೂಂಗಳು ಕೊರೊನಾ ವೈರಸ್‍ಗೆ ಬೆದರಿ ದೈನಂದಿನ ವಹಿವಾಟು ಸ್ಥಗಿತ ಗೊಳಿಸಿತ್ತು. ಈ ಹಿನ್ನೆಲೆ ನೌಕರರು, ಕೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ಇದರÀಲ್ಲಿ ಸುಬ್ರಮಣಿ ಕೂಡ ಒಬ್ಬರಾಗಿದ್ದರು. ಕೆಲಸ ಕಳೆದುಕೊಂಡು ಮುಂದೇನು ಎಂದು ಯೋಚಿಸಿ ಸಮಯ ಹಾಳು ಮಾಡದ ಈತ, ಸ್ವ ಉದ್ಯೋಗಕ್ಕೆ ಮುಂದಾಗಿದ್ದು, ಇದೀಗ ವ್ಯಾಪಾರ ಉತ್ತಮವಾಗಿ ಸಾಗುತ್ತಿದೆ.

ಯುವಕನ ಕೈ ಹಿಡಿದ ಕುಕ್ಕುಟೋದ್ಯಮ!: ಲಾಕ್‍ಡೌನ್‍ನಿಂದ ಕೆಲಸ ಕಳೆದುಕೊಂಡ ಸುಬ್ರಮಣಿ ಸ್ವ ಉದ್ಯೋಗದ ಚಿಂತನೆಯಲ್ಲಿದ್ದ ಸಂದರ್ಭ ಸಹೋದರರು ಕಡಿಮೆ ಬಂಡವಾಳದಿಂದ ಲಾಭಗಳಿಸುವ ಕೋಳಿ ಸಾಕಾಣಿಕೆಯ ಸಲಹೆ ನೀಡಿದ್ದಾರೆ. ಮನೆಯ ಸಮೀಪದಲ್ಲೇ 20x10 ಅಡಿ ಜಾಗದಲ್ಲಿ ರೂ 60 ಸಾವಿರ ವೆಚ್ಚದಲ್ಲಿ ಸುಸಜ್ಜಿತ ಕೋಳಿ ಗೂಡು ನಿರ್ಮಿಸಿದ್ದಾರೆ. ಅಲ್ಲದೇ ರೂ 30 ಸಾವಿರಕ್ಕೆ ಮೈಸೂರು, ಕುಶಾಲನಗರ, ಕೂಡಿಗೆ, ಹುಂಡಿ, ಇನ್ನಿತರ ಕಡೆಗಳಿಂದ ಉತ್ತಮ ತಳಿಯ ನಾಟಿ ಕೋಳಿ ಮರಿಗಳನ್ನು ಖರೀದಿಸಿದ್ದಾರೆ. ಇದೀಗ ಕೋಳಿ ಮರಿಗಳು ಬೆಳೆದಿದ್ದು ಪ್ರತೀ ದಿನ ವ್ಯಾಪಾರದಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಸುಬ್ರಮಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೋಳಿಗಳಿಗೆ ಸಾವಯವ ಆಹಾರ ಪೂರೈಕೆ: ಸಾಮಾನ್ಯವಾಗಿ ಕೋಳಿಗಳ ತೂಕ ಹೆಚ್ಚಿಸಲು ರಾಸಾಯನಿಕ ಪದಾರ್ಥಗಳನ್ನು ಆಹಾರದ ರೂಪದಲ್ಲಿ ನೀಡುವುದು ಕಾಣಬಹುದು. ಆದರೆ ಈತ ಕೋಳಿಗಳಿಗೆ ಕೀರೆಸೊಪ್ಪು, ಗಿಣಕೆ (ಕಾಗೆ) ಸೊಪ್ಪು, ನುಗ್ಗೆ ಸೊಪ್ಪುಗಳನ್ನು ನೀಡುತ್ತಿದ್ದಾನೆ. ಅಲ್ಲದೆ ಕೋಳಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ನಿರ್ದೇಶನದಂತೆ ಮಾತ್ರೆಗಳನ್ನು ನೀರಿನಲ್ಲಿ ಹಾಕಿ ನೀಡುತ್ತಿದ್ದಾನೆ. ಆಹಾರದಲ್ಲಿ ಏರುಪೇರಾದರೆ ಕೋಳಿಗಳು ಮೊಟ್ಟೆ ಹಾಕುವುದು ಕಡಿಮೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಆಹಾರ ಕ್ರಮಗಳನ್ನು ಬದಲಾಯಿ ಸುತ್ತಿಲ್ಲ. ರಾಸಾಯನಿಕ ಆಹಾರ ಪದಾರ್ಥಗಳನ್ನು ಬಳಸುತ್ತಿಲ್ಲ.

ದೊರಕದ ಸರಕಾರದ ಸಾಲ ಸೌಲಭ್ಯ: ಸಹಾಯಕ್ಕೆ ನಿಂತ ಸ್ನೇಹಿತರು: ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಬ್ರಮಣಿ ಅಗತ್ಯ ದಾಖಲಾತಿ ಗಳೊಂದಿಗೆ ಗ್ರಾಮ ಪಂಚಾಯಿತಿಯಲ್ಲಿ ಎರಡು ಬಾರಿ ಅರ್ಜಿ ಸಲ್ಲಿಸಿದ್ದರು. ಕಾರಣಾಂತರಗಳಿಂದ ಸರ್ಕಾರದ ಯೋಜನೆ ಪಡೆಯುವಲ್ಲಿ ವಿಫಲರಾದರು. ಈ ಸಂದರ್ಭ ಆತನ ಸ್ನೇಹಿತರು ಸುಬ್ರಮಣಿಯ ಕನಸು ಸಾಕಾರಗೊಳಿಸಲು ಹಣಕಾಸಿನ ನೆರವು ನೀಡಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡಿದರು.

ಅತ್ಯುತ್ತಮ ತಳಿಯ ನಾಟಿ ಕೋಳಿಗಳು ಹಾಗೂ ನಾಟಿ ಕೋಳಿ ಮೊಟ್ಟೆಯಲ್ಲಿ ಕುದುರಿದ ವ್ಯಾಪಾರ: ಬಹುತೇಕರು ಲಾಭಗಳಿಸುವ ಉದ್ದೇಶದಿಂದ ಫಾರಂ ಕೋಳಿಗಳ ಸಾಕಾಣೆಗೆ ಮೊರೆ ಹೋಗುವುದು ಸಾಮಾನ್ಯ. ಆದರೆ ಈತ ಉತ್ತಮ ನಾಟಿ ಕೋಳಿಗಳಾದ ಗಿರಿರಾಜ, ನಾಟಿ ಕೋಳಿ, ಕಡಕನಾಥ್ ಇನ್ನಿತರ ತಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಅಪರೂಪದ ತಳಿಗಳು ಜನಾಕ ರ್ಷಣೆಗೆ ಕಾರಣವಾಗಿದೆ. ನಾಟಿ ಕೋಳಿ ಕೆ.ಜಿ.ಗೆ ರೂ. 350 ರಂತೆ ಮಾರಾಟವಾಗುತ್ತಿದೆ. ಅಲ್ಲದೆ ರೂ. 8 ರಂತೆ ನಾಟಿ ಕೋಳಿ ಮೊಟ್ಟೆ ಕೂಡ ಪ್ರತಿದಿನ ಮಾರಾಟವಾಗುತ್ತಿದ್ದು, ಬೇಡಿಕೆ ಹೆಚ್ಚಾಗುತ್ತಿದ್ದು, ಮೊಟ್ಟೆ ಸಾಕಾಗುತ್ತಿಲ್ಲ ಎಂದು ಸುಬ್ರಮಣಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಯುವಕನ ಉತ್ಸಾಹಕ್ಕೆ ಮನೆಯವರ ಪ್ರೋತ್ಸಾಹ: ಕೆಲಸ ಕಳೆದುಕೊಂಡು ಮನೆಯಲ್ಲಿ ಸೋಮಾರಿಯಾಗುವ ಕೆಲವು ಯುವಕರ ಮಧ್ಯೆ ಸುಬ್ರಮಣಿ ಸ್ವ ಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿ ಮನೆಯವರ ಬಳಿ ತನ್ನ ಇಂಗಿತವನ್ನು ವ್ಯಕ್ತಪಡಿಸಿದ ಸಂದರ್ಭ ತಾಯಿ, ಅಣ್ಣ ಹಾಗೂ ಇನ್ನಿತರರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಿದರು. ಕುಟುಂಬದ ಪ್ರೋತ್ಸಾಹ ತನ್ನ ಯಶಸ್ಸಿಗೆ ಕಾರಣವಾಗಿದೆ ಎಂದು ಸುಬ್ರಮಣಿ ತಿಳಿಸಿದರು. ಕೊರೊನಾ ಹಿನ್ನೆಲೆ ಕೆಲಸ ಕಳೆದುಕೊಂಡೆ ಈ ಸಂದರ್ಭ ನನಗೆ ಹೊಳೆದದ್ದು ಸ್ವ ಉದ್ಯೋಗ. ಬಂಡವಾಳದ ಕೊರತೆ ಇದ್ದು ಗೊಂದಲದಲ್ಲಿದ್ದ ಸಂದರ್ಭ ಸ್ನೇಹಿತರು ಕುಕ್ಕುಟೋದ್ಯಮದ ಸಲಹೆ ನೀಡಿದರು. ಮನೆ ಅಂಗಳದಲ್ಲಿ ಸುಸಜ್ಚಿತ ಗೂಡುಗಳನ್ನು ಸ್ನೇಹಿತರು ಹಾಗೂ ಕುಟುಂಬದವರ ನೆರವಿನಿಂದ ಕಡಿಮೆ ಬಂಡವಾಳದಲ್ಲಿ ಮಾಡಲಾಗಿದೆ ಎಂದರು.

ಇದೀಗ ಕೋಳಿ ವ್ಯಾಪಾರ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಬಾತು ಕೋಳಿ ಹಾಗೂ ಇನ್ನಿತರ ಕೋಳಿಗಳ ತಳಿಗಳನ್ನು ಸಾಕುವ ಬಗ್ಗೆ ಗುರಿಯನ್ನು ಹೊಂದಿ ಕೊಂಡಿರುವುದಾಗಿ ಸುಬ್ರಮಣಿ ತಿಳಿಸಿದರು.

- ವಾಸು ಎ.ಎನ್.