ಮಡಿಕೇರಿ, ಡಿ. 4: ಪೊನ್ನಂಪೇಟೆ ತಾಲೂಕು ಉದ್ಘಾಟನಾ ಸಮಾರಂಭ ವನ್ನು ನೆಪವಾಗಿರಿಸಿಕೊಂಡು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳು ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಿದ ಹೇಳಿಕೆಯೇ ಹೊರತು ಈ ಟೀಕೆಗಳಲ್ಲಿ ಹುರುಳಿಲ್ಲವೆಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ಮಹೇಶ್ ಜೈನಿ ತಿರುಗೇಟು ನೀಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ತುಘಲಕ್ ದರ್ಬಾರ್ ನಡೆಸಿದ್ದನ್ನು ಮರೆತಿರುವ ವೀಣಾ ಅಚ್ಚಯ್ಯ ಅವರು ವಿನಾಕಾರಣ ಬಿಜೆಪಿಯ ಜನಪರ ಕಾಳಜಿಯನ್ನು ಹಿಟ್ಲರ್ ಸಂಸ್ಕøತಿಗೆ ಹೋಲಿಸಿದ್ದು ಖಂಡನೀಯವೆಂದು ಹೇಳಿದ್ದಾರೆ.

ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆ ಅನುಷ್ಠಾನಕ್ಕೆ ಕಾರಣಕರ್ತರಾಗಿದ್ದ, ಜಿಲ್ಲೆಯ ಶಾಸಕರುಗಳನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದೆ ಅಂದು ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಆಡಳಿತ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

ಪ್ರತ್ಯೇಕ ತಾಲೂಕು ಹೋರಾಟವನ್ನು ಗಮನಿಸಿದರೆ ಪೊನ್ನಂಪೇಟೆಗೆ ಶೀಘ್ರ ಯಶಸ್ಸು ಸಿಕ್ಕಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ಹಿರಿಯ, ಕಿರಿಯ ಹೋರಾಟಗಾರರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರೆಲ್ಲರೂ ಅಭಿನಂದನಾರ್ಹರು ಎಂದಿದ್ದಾರೆ. ಕೋವಿಡ್ ಹಿನ್ನೆಲೆ ಹೋರಾಟ ಸಮಿತಿ ಅಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರು ಕೂಡಾ ಸರಳ ಹಾಗೂ ತುರ್ತಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅರುಣ್ ಅವರು ಪಕ್ಷಾತೀತವಾಗಿ ಎಲ್ಲ ಪಕ್ಷದವರನ್ನು ಕರೆದು ಹೇಳಿಕೆ ನೀಡಿದ್ದರು ಎಂದು ಮಹೇಶ್ ನೆನಪಿಸಿದ್ದಾರೆ.