ಕೊಡಗಿನ ಗುಡ್ಡಗಳ ಸಾಲಿನ ಎತ್ತರವು ಪಶ್ಚಿಮಘಟ್ಟಗಳ ಶೃಂಗಗಳಲ್ಲಿ ಕೊನೆಗೊಳ್ಳುತ್ತದೆ. ಈ ಘಟ್ಟಗಳು ವಾಯುವ್ಯದ ಸುಬ್ರಮಣ್ಯದಿಂದ (ಪುಷ್ಪಗಿರಿ) ದಕ್ಷಿಣದ ಬ್ರಹ್ಮಗಿರಿಯ ಕೊನೆಯವರೆಗೆ ಹಬ್ಬಿವೆ. ಸುಮಾರು 96.6 ಕಿ.ಮೀ (60 ಮೈಲಿ)ಗಳಷ್ಟು ಆ ಹಬ್ಬುಗೆಯ ಉದ್ದ ಇದೆ. ಇವುಗಳ ನಡುವೆ ಹೊಳೆ, ತೊರೆ, ತಲೆ ತೊರೆ, ತೋಡುಗಳು ಅಸಂಖ್ಯವಾಗಿವೆ. ಈ ಘಟ್ಟಗಳಲ್ಲಿ ಎದ್ದು ಕಾಣುವ ಉಪ ವಿಭಾಗಗಳೆಂದರೆ, ದಕ್ಷಿಣದಲ್ಲಿ ಬ್ರಹ್ಮಗಿರಿ ಶ್ರೇಣಿಯ ಭಾಗವಾಗಿ ಮಲೆನಾಡು ಬೆಟ್ಟದ ಶ್ರೇಣಿಗಳು ಇವೆ. ನೈರುತ್ಯ ಭಾಗದಲ್ಲಿ ಕೊಡಗು ಹಾಗೂ ಕೇರಳದ ವೈನಾಡನ್ನು ದೇವಾಸಿ ಬೆಟ್ಟದ ಮೂಲಕ ಇವು ಬೇರ್ಪಡಿಸುವ ಗಡಿ ಆಗಿವೆ. ಅವುಗಳ ಸರಾಸರಿ ಎತ್ತರ 1371.6 ಮೀ. (4500 ಅಡಿ) ಇದೆ. ಅಲ್ಲಿ ಬ್ರಹ್ಮಗಿರಿ ಶ್ರೇಣಿಯ ಅತ್ಯುನ್ನತ ಬೆಟ್ಟ ದೇವಾಸಿ ಬೆಟ್ಟವೆ ಆಗಿದೆ. ಇಲ್ಲಿ ನೂರಾರು ಅಡಿ ಎತ್ತರದಲ್ಲಿನ ಹುಗಲೆ ಮಲೆಯ ಮೇಲೆ ಬಹು ಸುಂದರವಾದ ಪ್ರಸ್ಥಭೂಮಿ ಇದೆ. ಅದರ ಪಶ್ಚಿಮಕ್ಕೆ ಹನುಮಂತನ ಬೆಟ್ಟವಿದೆ. (ಶಿರದ ಬಳಿ ಸುಂದರ ಸುತ್ತುಗೆರೆಯ ನೋಟ ಇದ್ದು ಜನಪದದಲ್ಲಿ ಹನುಮಂತನ ಬಾಲದ ಸುತ್ತು ಎನ್ನುವುದುಂಟು) ಹಾಗೂ ಕುಡಂಗ ಮಲೆ ಇದೆ. ಪೆರುಮಲೆ ಕೂಡ ಇದೆ. ಇಡೀ ಕಿಗ್ಗಟ್ಟು ನಾಡಿನಲ್ಲಿ ಬ್ರಹ್ಮಗಿರಿಯ ವಿವಿಧ ದಿಕ್ಕುಗಳಲ್ಲಿ ಕವಲಾಗಿ ಬಂದಿರುವ ಸಣ್ಣಪುಟ್ಟ ಬೆಟ್ಟಗಳಿವೆ. ಕಾವೇರಿಯ ಪೂರ್ವ ದಿಸೆಯಲ್ಲಿ ಕಿರಿದಾದ ಗುಡ್ಡ ಸಾಲುಗಳಿವೆ. ನಂತರ ಏರುಮುಖವಾಗಿ ಬಿಟ್ಟಂಗಾಲ-ವೀರರಾಜೇಂದ್ರಪೇಟೆ ಬಳಿ ಅಂಬಟೆ ಬೆಟ್ಟವಿದೆ. (ಅದರ ತಪ್ಪಲಲ್ಲಿ ಅಂಬಟೆ ಎಂಬ ಗ್ರಾಮವೂ ಇದೆ. ಈ ಸುಂದರ ಏಕಾಂಗಿ ನೈಸರ್ಗಿಕ ಏರುನೆಲೆಯ ದಕ್ಷಿಣ ಮುಖ ಅಂಬಟೆಬೆಟ್ಟ ಎನಿಸಿಕೊಳ್ಳುತ್ತದೆ. ಅದರ ಉತ್ತರ ಪಾಶ್ರ್ವದ ತಪ್ಪಲಿನಲ್ಲಿ ಮಗ್ಗುಲ ಗ್ರಾಮವಿದ್ದು, ಆ ಬದಿಯಲ್ಲಿನ ಬೆಟ್ಟದ ಭಾಗವು ಮಗ್ಗುಲ ಬೆಟ್ಟವೆನಿಸಿದೆ) ಹಾತೂರು (ಕೈಕೇರಿ ಬಳಿ) ಕುಂದ ಬೆಟ್ಟವಿದೆ. ಕುಕ್ಲೂರು ಬಳಿ ಇನ್ನೊಂದು ಕುಂದ ಬೆಟ್ಟವಿದೆ. ಇವಲ್ಲದೆ ಸಿದ್ಧೇಶ್ವರ ಬೆಟ್ಟ (ಮಾಲ್ದಾರೆ ಬಳಿ). ಮೂರ್ಕಲ್ ಬೆಟ್ಟಗಳಿವೆ. ವಿಪುಲ ಸಂಖ್ಯೆಯ ಭತ್ತದ ಗದ್ದೆಗಳನ್ನು ಆವರಿಸಿಕೊಂಡಿರುವ ಪ್ರದೇಶಗಳಲ್ಲದೆ, ಪೂರ್ವದಿಸೆಯ ಪ್ರಸ್ಥಭೂಮಿಯಲ್ಲಿವೆ. ಅವುಗಳಲ್ಲಿ ಕೆಲವು ಬಹಳ ವಿಸ್ತಾರವಾದ ಗದ್ದೆಗಳೂ ಇವೆ.
ವೀರರಾಜೇಂದ್ರಪೇಟೆ ಬಳಿ (ತಲಚೇರಿ, ಕಣ್ಣಾನೂರಿನ ರಸ್ತೆ ಇರುವ) ಪೆರುಂಬಾಡಿ ಕಣಿವೆಯಿಂದ ಕಾವೇರಿ ಮೂಲದ ಬಳಿಯ ತೊಡಿಕಾನ್ ಕಣಿವೆಯವರೆಗೆ ಪಶ್ಚಿಮ ಘಟ್ಟಗಳಿಗೆ ಸರಪಳಿಯಂತೆ ವಾಯವ್ಯ ದಿಸೆಯಲ್ಲಿ ಸುಮಾರು 30 ಮೈಲಿ (48.3 ಕಿ.ಮೀ) ಉದ್ದವಾಗಿ ಒಂದೇ ನೇರದಲ್ಲಿ ಗಿರಿಶ್ರೇಣಿ ವಿಸ್ತರಿಸಿದೆ. ಅವುಗಳಲ್ಲಿ ಮುಖ್ಯ ಬೆಟ್ಟ ಶಿಖರಗಳಿವೆ. ಪಾಡಿನಾಲ್ಕು ನಾಡಿನ ದಕ್ಷಿಣಕ್ಕೆ ನಾಲ್ನಾಡು ಅರಮನೆ ಬಳಿ ತಡಿಯಂಡಮೋಳು ಇದೆ. ಅದರ ಆಗ್ನೇಯಕ್ಕೆ (ಕೇರಳದ ದೇವರು ತಂಬಿರಾನ್ ನೆಲೆಯಾದ ಜೋಯ ಮಲೆ (ಮಲೆತಿರಕೆ?) ಇದೆ. ಈಶಾನ್ಯಕ್ಕೆ ಇಗ್ಗುತಪ್ಪಕುಂದ್ (ಪಾಡಿತೊರ ಕಣಿವೆ ಬಳಿ) ಬೆಟ್ಟವಿದೆ. ಇಲ್ಲಿಂದ ಮೂರು ಮೈಲಿ ದೂರದಲ್ಲಿ ಪೇರೂರು ಬೆಟ್ಟವಿದೆ. ಈ ಬೆಟ್ಟದಿಂದ ನಾಲ್ಕು ಮೈಲಿ ದೂರದಲ್ಲಿ ಇಲ್ಲೊಂದು ಶ್ರೀಮಂಗಲ ಗುಡ್ಡೆ (Poiಟಿಣ) ಇದೆ. ತಾವು ನಾಡಿನಲ್ಲಿ (ಭಾಗಮಂಡಲ ನೆರೆ ಪ್ರದೇಶ) ತಲಕಾವೇರಿ ಸನಿಹದ ಬ್ರಹ್ಮಗಿರಿ ಇದೆ. ಪಾಡಿನಾಲ್ಕುನಾಡು ತಾಲೂಕಿನಿಂದ (ಈಗಿನ ಕಕ್ಕಬೆ, ಪಾಡಿ ಸುತ್ತಮುತ್ತಲ ಪ್ರದೇಶ) ಮಡಿಕೇರಿ ತಾಲೂಕಿನ ಪೂರ್ವದಿಸೆಗೆ ಹಬ್ಬಿರುವ ಬೇಂಗುನಾಡು ಗಿರಿಶ್ರೇಣಿ ಎರಡು ಭಾಗಗಳನ್ನು ಹೊಂದಿದೆ. ಒಂದು ಮಡಿಕೇರಿಯ ದಕ್ಷಿಣ ಭಾಗಕ್ಕೆ ಸಿದ್ದಾಪುರದತ್ತ ಇರುವ ನೂರೊಕ್ಕಲು ಬೆಟ್ಟದ ಶಿಖರಗಳಲ್ಲಿ ಮುಕ್ತಾಯವಾಗುತ್ತದೆ. ಇನ್ನೊಂದು ಪೂರ್ವಕ್ಕೆ ಬಳಸು ಬಳಸಾಗಿ ಫ್ರೇಸರ್ ಪೇಟೆ (ಈಗಿನ ಕುಶಾಲನಗರ) ಕಡೆ ಸಾಗಿ ಕಲ್ಲೂರು ಬೆಟ್ಟದ ಶಿಖರಗಳಲ್ಲಿ ಕೊನೆ ಸಾಗಿ ತೇಗದ ಮರಗಳ ಹೊದಿಕೆ ಹೊಂದಿದೆ. ಕೊಡಗಿನ ಬಹುತೇಕ ಭಾಗಗಳಿಗೆ ಕಾಣುವ ಚೆಲುವಿನ ಶಿಖರ ಹೊಂದಿದ 4488 ಅಡಿ (1367.6 ಮೀ) ಎತ್ತರದ ಐತಿಹಾಸಿಕ ಮಾಲಂಬಿ ಬೆಟ್ಟವಿದೆ. ಅಲ್ಲದೆ ಮೂಲತ: ದಟ್ಟ ಅರಣ್ಯ ಹೊಂದಿದ್ದು ವಿಪುಲ ಭತ್ತದ ಕೃಷಿ ಪ್ರದೇಶವಿದ್ದು ಈ ಕಾಫಿ ತೋಟಗಳನ್ನು ತುಂಬಿ ಕೊಂಡಿರುವ ಕಣಗಾಲು ಬೆಟ್ಟವಿದೆ.
ಮಡಿಕೇರಿಯ ಈಶಾನ್ಯದಲ್ಲಿ ಹುಟ್ಟಿರುವ ಸಂಪಾಜೆ ಘಟ್ಟ-ಕಣಿವೆ ಇದೆ. [ಮಡಿಕೇರಿಯ ಅರಮನೆ ಇರುವ ನೆಲೆ ಮೊದಲಿಗೆ ಎತ್ತರವಿದ್ದ ಬೆಟ್ಟವಾಗಿತ್ತು ಎಂಬ ಸೂಚನೆ ಅರಮನೆಯ ಭಿತ್ತಿಯಲ್ಲಿರುವ 1812ರ ಶಾಸನದಿಂದ ತಿಳಿಯುತ್ತದೆ. (ಡಿ.ಎನ್.ಕೆ. ಪು 419)] ‘ಸುಬ್ರಹ್ಮಣ್ಯ’ ಎಂದೂ ಕರೆಯಲ್ಪಡುವ ಗೂಳಿಯ ಆಕಾರದಲ್ಲಿರುವ ಕಡಿದಾದ 5626 ಅಡಿ (1714.8 ಮೀ.) ಎತ್ತರದ ಪುಷ್ಪಗಿರಿ ಬೆಟ್ಟವಿದೆ. ಈ ಬೆಟ್ಟದ ಮೇಲೆ ನಿಂತರೆ ಕೊಡಗು, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಯ ಸುಂದರ ನೋಟಗಳು ಕಾಣುತ್ತವೆ. ಮಡಿಕೇರಿಯ ಉತ್ತರಕ್ಕೆ ಒಂಭತ್ತು ಮೈಲಿ ದೂರದಲ್ಲಿ ಕೋಟೆಬೆಟ್ಟವಿದೆ. 5375 (1638.3 ಮೀ) ಅಡಿ ಎತ್ತರದ ಈ ಬೆಟ್ಟದ ಶಿಖರದ ಸನಿಹದಲ್ಲಿ ಎರಡು ನೀರಿನ ಕೊಳಗಳು ಇವೆ. ರುದ್ರ ರಮಣೀಯ ಈ ಗಿರಿಯಿಂದ ಕೊಡಗಿನ ನೋಟಗಳು ಮೋಹಕವಾಗಿ ಕಾಣುತ್ತವೆ. ಇದರ ಉತ್ತರಕ್ಕೆ ತಪ್ಪಲಿನಲ್ಲಿ ಕಾಫಿ ತೋಟಗಳಿಗೆ ಆಸರೆಯಾಗಿರುವ ಶಾಂತಳ್ಳಿ ಬೆಟ್ಟವಿದೆ. ಇದಕ್ಕೆ ಮುಕರಿ ಬೆಟ್ಟ ಎಂಬ ಹೆಸರೂ ಇದೆ. ಕೊಡಗಿನ ಉತ್ತರದ ಗಡಿಯಿಂದ ಕಾವೇರಿಯ ದಕ್ಷಿಣದವರೆಗೆ ವ್ಯಾಪಿಸಿರುವ ಏಳು ಸಾವಿರ ಸೀಮೆಯ ಬೆಟ್ಟಗಳಿವೆ.
ಸೋಮವಾರಪೇಟೆ ಬಳಿಯ ಚೌಡ್ಲು-ಕಲಕಂದೂರು ಬೆಟ್ಟ, ಶನಿವಾರಸಂತೆ ಬಳಿಯ ಪ್ರಸಿದ್ಧ ಮಾಲಂಬಿ ಬೆಟ್ಟ, ಪಾಡಿ ನಾಲ್ಕು ನಾಡಿನ ಈರುಳ್ಳಿಬನ, ಬೃಹತ್ ಬಲ್ಯಾಟರ್ರೆ ಕಾಡಿನ ಬೆಟ್ಟ, ದರ್ಗದ ಬೆಟ್ಟ, ಮಾಪಿಳ್ಳೆಮೊಟ್ಟ್, ಕೊಂಡಮಂಡಿ ತೋಟ, ಕೋಲಿಂದಮಲೆ, ಕಡಿಯತ್ನಾಡಿನ ಚೇಲಾವರ ಬೆಟ್ಟ, ಬಲ್ಲಮಾವಟಿ-ಅಯ್ಯಂಗೇರಿಯ ಚಿನ್ನತಪ್ಪಮಲೆ (ಚಾಚು ಮಲೆ), ಅಂಬಟೆಬೆಟ್ಟ, ನಾಂಗಾಲ-ಕಳ್ತೋಡು ಬೆಟ್ಟ, ಕಮರಟತಪ್ಪಮಲೆ, ಕಗ್ಗಟ್ಟುನಾಡಿನ ಕುರ್ಚಿ ಮಂಚಳ್ಳಿಬೆಟ್ಟ ಮುಂತಾದವು ಸಾಂಸ್ಕøತಿಕ ಮಹತ್ವದವುಗಳಾಗಿವೆ. ಕೊಡಗಿನ ಕಡಂಗಗಳು ಈ ಎಲ್ಲ ಗಿರಿಗಳ ಮೇಲೆ ಎಲ್ಲ ದಿಸೆಗಳಲ್ಲಿ ನೂರಾರು ಕಿ.ಮೀ. ವರೆಗೆ ಹಬ್ಬಿ ರಕ್ಷಣೆಯ ಕಟ್ಟುಗಳಾಗಿದ್ದವು.
ಕೊಡಗಿನಲ್ಲಿ ಹರಿವ ನದಿಗಳು ಸತತÀ ಹರಿವ ನದಿಗಳೇ ವಿನಾ ವಿಶಾಲ ನದಿಗಳಲ್ಲ. ಪೂರ್ವಕ್ಕೆ ಹೆಚ್ಚಿನ ಹೊಳೆಗಳು ಹರಿಯುತ್ತದೆ. ಪಶ್ಚಿಮಕ್ಕೆ ಕೆಲವು ಹೊಳೆಗಳು ಹರಿಯುತ್ತವೆ. 1341 ಮೀ. ಎತ್ತರದಲ್ಲಿ ಬ್ರಹ್ಮಗಿರಿ ಶ್ರೇಣಿಯಲ್ಲಿ ಕಾವೇರಿ ಮೈದೆಳೆಯುತ್ತದೆ. ಭಾಗಮಂಡಲದಿಂದ ಎಂಟು ಕಿ.ಮೀ. ದೂರದಲ್ಲಿ ಈ ಶ್ರೇಣಿಯಲ್ಲಿನ ತಲಕಾವೇರಿಯಲ್ಲಿ ಈ ಪವಿತ್ರ ಪ್ರಸಿದ್ಧ ನದಿ ಚಿಮ್ಮುತ್ತದೆ. 765 ಕಿ.ಮೀ. ದೂರ ತಲಕಾವೇರಿಯಿಂದ ಚಿಮ್ಮಿ ಹರಿದು ಕೊನೆಗೆ ತಮಿಳುನಾಡಿನ ಪೂಂಪಟ್ಟಣದ ಬಳಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಬ್ರಹ್ಮಗಿರಿ ಶ್ರೇಣಿಯ ದೇವಾಸಿ ಬೆಟ್ಟದ ಪೀಠಭೂಮಿ ಭಾಗವೆನಿಸಿದ ಮುನಿಕಾಡು ಅರಣ್ಯದಲ್ಲಿ ಲಕ್ಷ್ಮಣತೀರ್ಥ, ರಾಮತೀರ್ಥ ನದಿಗಳು ಹುಟ್ಟುತ್ತವೆ. ತಡಿಯಂಡ್ಮೋಳುವಿನಲ್ಲಿ ಹುಟ್ಟಿ ಕಡಿಯತ್ನಾಡನ್ನು ಪಾಡಿ ನಾಲ್ಕುನಾಡಿನಿಂದ ಬೇರ್ಪಡಿಸುವ ಕಕ್ಕಬೆ ಹೊಳೆ ಇದೆ. ಬೆಪ್ಪುನಾಡಿಗೆ ಬರುವ, ಹೆಗ್ಗಳದಲ್ಲಿ ಹುಟ್ಟಿದ ಕದನೂರು ಹೊಳೆ ಕೊಟ್ಟೋಳಿ, ಕದನೂರು, ಬೆಳ್ಳರಿಮಾಡು, ಮೈತಾಡಿ ನಾಲ್ಕೇರಿ ಮೂಲಕ ಸಾಗಿ ಚೂರಿ ಮುಡಿಗೆ ಬಂದು ಕಾವೇರಿಗೆ ಸೇರುತ್ತದೆ. ಮೇಲಿನ ಹೊಳೆಗಳು ಕರಡದಲ್ಲಿ ಹುಟ್ಟುವ ಬೆಳ್ಳುಮಾಡು ಹೊಳೆಯು ಕಾವೇರಿಗೆ ಸೇರುತ್ತದೆ. ಎಡೆನಾಲ್ಕುನಾಡಿನಿಂದ ಕುಮ್ಮ ಹೊಳೆ ಇದೆ. ಮಡಿಕೇರಿಯ ದಕ್ಷಿಣ ಗುಡ್ಡಗಳ ಸಾಲುಗಳ ಇಳುಕಲಿನಿಂದ ಇಳಿವ ತೋಡುಗಳನ್ನು ಕೂಡಿಕೊಂಡು ಬರುವ ಮುತ್ತಾರುಮುಡಿಹೊಳೆ ಇದೆ. ಹೊರೂರು ನೂರೊಕ್ಕಲುನಾಡಿನ ಕಣಿವೆಗಳಿಂದ ಬರುವ ಚಿಕ್ಲಿಹೊಳೆ ಇದೆ. ಶಾಂತಳ್ಳಿಯ ಚಾರಣಹೊಳೆ, ಮಾದಾಪುರಹೊಳೆ, ಕೋಟೆಬೆಟ್ಟದ ಹಟ್ಟಿಹೊಳೆ, ಸೋಮವಾರಪೇಟೆಯ ಕಕ್ಕೆಹೊಳೆ, ಹಾರಂಗಿ ಹೊಳೆ (ಸುವರ್ನಾವತಿ) ಇವೆ. ಇವೆಲ್ಲವೂ ಕಾವೇರಿಗೆ ಸೇರುವಲ್ಲಿ ಬಹಳಷ್ಟು ಪ್ರಮಾಣದಲ್ಲಿ ನೀರನ್ನು ತುಂಬಿಸುತ್ತದೆ. ಕಾವೇರಿಯು ಸಿದ್ಧಾಪುರದ ಬಳಿ ತಕ್ಷಣ ತಿರುವನ್ನು ಉತ್ತರಕ್ಕೆ ತೆಗೆದುಕೊಳ್ಳುತ್ತದೆ. 25 ಮೈಲಿಗಳ ತನಕ ಅಲ್ಲಿಂದ ಕೊಡಗಿನ ಪೂರ್ವಗಡಿಯ ಸಮೀಪ ಹರಿಯುತ್ತದೆ. ಈ ಪೂರ್ವ ದಂಡೆಯಲ್ಲಿ ಐತಿಹಾಸಿಕ ನಂಜರಾಯಪಟ್ಟಣವಿದೆ. ಚೋಳರು ಕ್ರಿ.ಶ. 1004ರ ಸಮಯದಲ್ಲಿ ಸ್ಥಾಪಿಸಿದ ಚೋಳ ಪ್ರತಿಷ್ಠೆಯ ವೀರಭದ್ರ ಗುಡಿಯ ಅವಶೇಷಗಳಿವೆ. ಕೊಡಗು ಜಿಲ್ಲಾ ಗ್ಯಾಸೆಟಿಯರ್ 1965 (ಸಂ. ಬಿ.ಎನ್. ಸತ್ಯನ್ ಪು. 43-45). ಇಂದು ಕೊಡಗು ಶ್ರೀರಂಗಪಟ್ಟಣದ ಅವಶೇಷಗಳೆನಿಸಿವೆ. ಇವೆಲ್ಲ ಪೂರ್ವಕ್ಕೆ ಹರಿವ ಹೊಳೆಗಳ ಸಾಲಿನ ಕತೆ.
ಪಶ್ಚಿಮಕ್ಕೆ ಹರಿವ ಮುಖ್ಯ ಹೊಳೆ ಬರಪೊಳೆ. ಇದು ಮರೆನಾಡು ಬಾಡಗರಕೇರಿ ಬಳಿ ತುಂಬೆ ಮಲೆಯ ಶಿಖರದಲ್ಲಿ (ಬ್ರಹ್ಮಗಿರಿ ಶ್ರೇಣಿ) ಹುಟ್ಟುತ್ತದೆ. ಅಲ್ಲಿಂದ 10 ಮೈಲಿ ದೂರ ಪೂರ್ವಕ್ಕೆ ಹರಿದು ಬೊಮ್ಮಂಜಿ ಕಿಟ್ಟ ಹೊಳೆ ಕೂಡಿ ಕಿಕ್ಕಟ್ಟು ಎಂಬಲ್ಲಿ ಉತ್ತರಕ್ಕೆ ತಿರುಗಿ ಅಲ್ಲಿಂದ ಸ್ವಲ್ಪ ದೂರದಲ್ಲಿ ಪಶ್ಚಿಮಕ್ಕೆ ತಿರುಗುತ್ತದೆ. ಹೈಸೊಡ್ಲೂರು, ಬೇಗೂರು, ಕುತ್ತುನಾಡು, ಬೆಟ್ಟಿಯತ್ನಾಡು ಹಾಗೂ ಬೇರಣನಾಡಿನ ಭಾಗವಾಗಿ ಸಾಗುತ್ತದೆ. ಅರವತೊಕ್ಕಲು ಗ್ರಾಮದ ಉತ್ತರ ಭಾಗದಲ್ಲಿ ಹುಟ್ಟಿ ದಕ್ಷಿಣಕ್ಕೆ ಹರಿದು ಬರುವ ಬೆಟ್ಟಿಯತ್ ನಾಡಿನ ಮಹಾಂದೋಡು ಹಳ್ಳಿಗಟ್ಟು, ಬೇಗೂರು ಗ್ರಾಮದ ಮೂಲಕ ಸಾಗಿ ಅನೇಕ ತೋಡುಗಳನ್ನು ಕೂಡಿಕೊಂಡು ಬರಪೊಳೆಯನ್ನು ಸೇರುತ್ತದೆ. ಕೊಂಗಣ ಹೊಳೆಯೂ ಅದಕ್ಕೆ ಸೇರಿ ಅಬ್ಬಿಯಾಗಿ ಧುಮುಕಿ ಬರಪೊಳೆಗೆ ಸೇರುತ್ತದೆ. ಕುಟ್ಟಂದಿ ಗ್ರಾಮದ ಬಳಿ ಹುಟ್ಟಿ ಬರುವ ಸಾರತ್ ನದಿ 434 ಅಡಿ ಎತ್ತರದಿಂದ ಅಬ್ಬಿಯಾಗಿ ಧುಮುಕಿ ಬರಪೊಳೆಗೆ ಸೇರುತ್ತದೆ. ಹೆಗ್ಗಳದ ಕಣಿವೆಯಲ್ಲಿ ಜನಿಸುವ ಕಲ್ಲಹೊಳೆ, ಪಾಡಿನಾಲ್ಕುನಾಡು ಗಿರಿಶ್ರೇಣಿಗಳಿಂದ ಬರುವ ಮಂಡ್ರೋಟು ಹೊಳೆ, ಉಡುಂಬೆ ಎರಮಾರೊಟ ಕಡಿಯಮಲೆ ಹೊಳೆಗಳು ಬರಪೊಳೆಗೆ ಸೇರುತ್ತವೆ. (ಸಂಪಾಜೆ ಪತ್ತಿ ಘಟ್ಟದಲ್ಲಿ ಹುಟ್ಟುವ ನೊಜೆಕಲ್ಲು ಹೊಳೆ ಕಾಸರಗೋಡು ಬಳಿ ಪಯಸ್ವಿನಿ ನದಿ ಎನಿಸಿ ಮತ್ತು ಯರ್ತಕರ್ತಿ ಹೊಳೆಗಳೂ ಅರಬ್ಬಿ ಸಮುದ್ರಕ್ಕೆ ಸೇರುತ್ತವೆ) ಹೀಗೆ ನೀರಿನ ಬೃಹತ್ ಜಾಲವನ್ನೇ ಪಡೆದ ಬರಪೊಳೆ ಕೇರಳದ ಕೂಟುಪೊಳೆಯೊಡನೆ ಬಲ್ಯಪತೇಮಿನಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ.
ಪೂರ್ವಕ್ಕೆ ಹರಿವ ಕಾವೇರಿಗೆ ಹನ್ನೆರಡು ಉಪನದಿಗಳು ಇದ್ದರೆ ಪಶ್ಚಿಮಕ್ಕೆ ಹರಿವ ಬರಪೊಳೆಗೆ ಒಂಭತ್ತು ಉಪನದಿಗಳಿವೆ. ಈ ಹಿಂದೆ ಹೇಳಿದಂತೆ ಭೂವಿಜ್ಞಾನಿಗಳು ಸುಮಾರು 7.5 ಮಿಲಿಯನ್ ವರ್ಷಗಳ ಹಿಂದೆ ಕಾವೇರಿಯು ಎರಡು ಕವಲಾಗಿ ಮೇಲು ಕಾವೇರಿ ಕೆಳಕಾವೇರಿ ಎಂಬ ಎರಡು ನದಿಯಾಗಿತ್ತು ಎನ್ನುತ್ತಾರೆ. ಪಶ್ಚಿಮಕ್ಕೆ ಕೆಳ ಕಾವೇರಿಯ ಹರಿವು ಇತ್ತು. ಕೇರಳದ ಭರತಪುಳವು ಅದರ ಇಂದಿನ ಅವಶೇಷವಾಗಿರಬೇಕು. ಆ ಕಾಲಕ್ಕೆ ಅರಬ್ಬೀ ಸಮುದ್ರವಿರಲಿಲ್ಲ. ಭೂ ಸಂಪರ್ಕವಿದ್ದ ಕಾರಣ ಕಾವೇರಿಯ ಈ ಪಶ್ಚಿಮ ಕವಲು ಆಫ್ರಿಕದ ಬಳಿಹ ಮಡಗಾಸ್ಕರ್ ಮೂಲಕ ಹರಿದು ಹೋಗುತ್ತಿತ್ತು ಎಂದೂ ಭೂವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಕೇರಳದ ಮಾನಂತೋಡಿ ಕಣಿವೆ ಸಾಗುವ ಹಾದಿಯನ್ನು ಕೊಡಗಿನ ಹಳೆಯ ಭೂಪಟಗಳು ಸೂಚಿಸುತ್ತವೆ. ಕೊಡಗಿನಲ್ಲಿ ಮಹಾಂದೋಡು ಹಾಗೂ ಬರಪೊಳೆ (ಭಾರತಪೊಳ್ಳೂ) ಕೇರಳದ ಮೂಲಕ ಸಾಗುವುದು. ಬರಪೊಳೆಯ ಪಶ್ಚಿಮ ದಿಸೆಯ ಪಥವು ಆಕ್ರಮಣದ ‘ಖiveಡಿ ಛಿಚಿಠಿಣuಡಿe’ ಸೂಚನೆಯಾಗಿರುವುದು; ಮಡಗಾಸ್ಕರಿನಲ್ಲಿ ವಾಯವ್ಯಕ್ಕೆ ಈಗಲೂ ‘ಮಹಾಗಂಗಾ’ (ಮಹಾಜುಂಗ) ಎಂಬ ನೆಲೆ ಇರುವುದು. ಇವೆಲ್ಲ ಮೇಲಿನ ಅಭಿಪ್ರಾಯಕ್ಕೆ ಬೆಂಬಲವಾಗುವಂತಿವೆ. ಅಲ್ಲದೆ ಕಾವೇರಿಯ ಕವಲುಗಳಲ್ಲಿ ಒಂದು ಕವಲು ಪಶ್ಚಿಮಕ್ಕೆ ಸಾಗುತ್ತಿದ್ದು ಅದರ ಪಥವು ಬರಪೊಳೆ ಹಾಗೂ ಆ ದಿಸೆಯಲ್ಲಿ ಅದರ ಉಪನದಿಗಳ ಸಂಗಮಪಥವಾಗಿ ಕೊಡಗಿನಿಂದಲೇ ಸಾಗುತ್ತಿದ್ದಿರಬಹುದೇ? ಎನಿಸುತ್ತದೆ. ಆ ಕಾಲಕ್ಕೆ ಕೊಡಗಿನ ಪಶ್ಚಿಮ ಘಟ್ಟಗಳೂ ಈಗಿನ ಎತ್ತರಕ್ಕೆ ಇರಲಿಲ್ಲ. ಇದಲ್ಲದೆ ಈ ಭೂ ಸಂಪರ್ಕಗಳ ಕಾರಣ ಆಫ್ರಿಕದ ‘ನೀಗ್ರಿಟೋ’ ಜನರು ಕೊಡಗಿಗೆ ಆಫ್ರಿಕೆಯಿಂದ ಓಡಾಡಿಕೊಂಡಿರಬಹುದೆನಿಸುತ್ತದೆ. ಈ ಬಗೆಗೆಲ್ಲ ಈ ಮುಂದಿನಂತೆ ವಿವರಿಸಬಹುದು; ಒಂದು ಕಾಲದಲ್ಲಿ ಕಾವೇರಿ ಪಶ್ಚಿಮದತ್ತ ಎರಡು ಕವಲು, ಪೂರ್ವದತ್ತ ಒಂದು ಕವಲು ಹೊಂದಿತ್ತು. ಪಶ್ಚಿಮದ ಒಂದು ಕವಲು ತುಂಬೆಮಲೆಯಲ್ಲಿ ಹುಟ್ಟುವ ಇಂದಿನ ಬರಪೊಳೆಯ ಪಥದಲ್ಲಿ ಸಾಗುತ್ತಿತ್ತು. ಅದೇ ಸಿದ್ದಾಪುರದ ಬಳಿಯಿಂದ ಪಶ್ಚಿಮದ ಕಡೆಯೂ ಒಂದು ಕವಲು ಹೊರಟು ಕೈಕೇರಿ ಸನಿಹದ ಕೊಳತ್ತೋಡು, ಬೈಗೋಡು ಪ್ರಾಗೈತಿಹಾಸಿಕ ನೆಲೆಯ ಮೂಲಕ ಸಾಗಿ ಮಹಾಂದೋಡುವಿಗೆ ನೀರಿನಾಸರೆ ಆಗಿತ್ತು. ಇದಕ್ಕೆ ನದೀ ಪಥಗಳ ಸಾಕ್ಷಿ ಇದೆ.
(ಮುಂದುವರಿಯುವುದು)
- ಡಾ|| ಎಂ. ಜಿ. ನಾಗರಾಜ್