ಮಡಿಕೇರಿ, ಡಿ. 5: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ನೋಡಲ್ ಅಧಿಕಾರಿ ಗಳನ್ನು ತಾಲೂಕುವಾರು ಮತ್ತು ವಿವಿಧ ಗ್ರಾಮ ಪಂಚಾಯಿತಿಗೆ ನಿಯೋಜಿಸಲಾಗಿದ್ದು, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಗ್ರಾ.ಪಂ. ಸಾರ್ವತ್ರಿಕ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾ.ಪಂ. ಚುನಾವಣೆಯು ಪಕ್ಷ ರಹಿತವಾಗಿದ್ದು, ನೋಡಲ್ ಅಧಿಕಾರಿಗಳು ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯು ತಾಲೂಕು ನೋಡಲ್ ಅಧಿಕಾರಿಗಳಿಗೆ ಇದೆ. ಹಾಗೆಯೇ 7 ರಿಂದ 10 ಗ್ರಾ.ಪಂ.ಗಳಿಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಬೇಕು ಎಂದು ಸೂಚಿಸಿದರು.

ಗ್ರಾ.ಪಂ. ಚುನಾವಣೆ ಸಂಬಂಧ ಕಚೇರಿ ಸಿದ್ಧತೆ ಮಾಡಿಕೊಳ್ಳಬೇಕು. ನೋಡಲ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು. ಜಿಲ್ಲೆಯ ಮಾಕುಟ್ಟ ಗಡಿಭಾಗದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ತೆಗೆದುಹಾಕುವುದು ಮತ್ತಿತರ ಸಂಬಂಧ ದೂರುಗಳು ಕೇಳಿಬರುತ್ತಿದ್ದು, ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಬೆಳೆ ನಷ್ಟ ದಾಖಲು ಮಾಡುವುದು, ಜಿಪಿಎಸ್ ಮಾಡುವುದು ಮತ್ತಿತರ ಕಾರ್ಯವನ್ನು ಮಾಡಬಹುದಾಗಿದೆ ಎಂದರು. ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಿಲ್ಲ. ಆದರೆ ಕೋವಿಡ್-19 ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರಾಜಕೀಯ ಭಾಷಣ ಮಾಡುವಂತಿಲ್ಲ ಎಂದರು.

ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಾಂದೂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಡಿಯೋಬ, ಚುನಾವಣಾ ತಹಶೀಲ್ದಾರ್ ಕುಸುಮ, ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ಯೋಗಾನಂದ, ತಾ.ಪಂ. ಇಒ ಲಕ್ಷ್ಮಿ, ಜಯಣ್ಣ, ಕೆ.ಸಿ.ಅಪ್ಪಣ್ಣ, ನೋಡಲ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು, ಇತರರು ಇದ್ದರು.

ನೋಡಲ್ ಅಧಿಕಾರಿಗಳ ಪಟ್ಟಿ : ಜಿಲ್ಲೆಯ ಮೂರು ತಾಲೂಕಿನ 101 ಗ್ರಾ.ಪಂ.ಗಳ ಚುನಾವಣಾ ಪ್ರಕ್ರಿಯೆ ಗಳನ್ನು ತಾಲೂಕು ಮಟ್ಟದಲ್ಲಿ ಮೇಲು ಸ್ತುವಾರಿ ಮಾಡಲು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ (ವೀರಾಜ ಪೇಟೆ), ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಾಂದೂ (ಸೋಮವಾರಪೇಟೆ) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಡಿಯೋಬ (ಮಡಿಕೇರಿ) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಅದೇ ರೀತಿ 7 ರಿಂದ 10 ಗ್ರಾ.ಪಂ.ಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು (ಗಾಳಿಬೀಡು, ಕಡಗದಾಳು, ಮಕ್ಕಂದೂರು, ಕಳಕೇರಿ ನಿಡುಗಣೆ, ಮರಗೋಡು, ಹೊಸ್ಕೇರಿ ಮತ್ತು ಹಾಕತ್ತೂರು), ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೋ (ಹೊದ್ದೂರು, ಕಾಂತೂರು ಮೂರ್ನಾಡು, ಕೊಣಂಜಗೇರಿ (ಪಾರಾಣೆ), ನರಿಯಂದಡ, ಕುಂಜಿಲ (ಕಕ್ಕಬ್ಬೆ), ನಾಪೋಕ್ಲು, ಎಮ್ಮೆಮಾಡು ಮತ್ತು ಬಲ್ಲಮಾವಟಿ), ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ (ಅಯ್ಯಂಗೇರಿ, ಬೆಟ್ಟಗೇರಿ, ಬೇಂಗೂರು ಚೇರಂಬಾಣೆ, ಭಾಗಮಂಡಲ, ಕುಂದಚೇರಿ ಮತ್ತು ಕರಿಕೆ), ಕೊಡಗು ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಬಿ.ಬಿ. ಪುಷ್ಪಾವತಿ (ಮದೆ, ಸಂಪಾಜೆ, ಪೆರಾಜೆ, ಚೆಂಬು ಮತ್ತು ಮೇಕೇರಿ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಲಿಂಗರಾಜಪ್ಪ (ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು, ಹಂಡ್ಲಿ, ಶನಿವಾರಸಂತೆ, ದುಂಡಳ್ಳಿ, ನಿಡ್ತ, ಆಲೂರು, ಗೌಡಳ್ಳಿ, ದೊಡ್ಡಮಳ್ತೆ), ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ (ನೆರುಗಳಲೆ, ಗಣಗೂರು, ಹಾನಗಲ್ಲು, ಬೇಳೂರು, ಚೌಡ್ಲು, ಕಿರಗಂದೂರು, ಐಗೂರು, ಬೆಟ್ಟದಳ್ಳಿ, ತೋಳೂರು ಶೆಟ್ಟಳ್ಳಿ ಮತ್ತು ಶಾಂತಳ್ಳಿ), ಸಹಕಾರ ಸಂಘಗಳ ಉಪ ನಿಬಂಧಕÀ ಸಲೀಂ (ನಂಜರಾಯಪಟ್ಟಣ, ವಾಲ್ನೂರು-ತ್ಯಾಗತ್ತೂರು, ಗುಡ್ಡೆಹೊಸೂರು, ನೆಲ್ಲಿಹುದಿಕೇರಿ, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ ಮತ್ತು ತೊರೆನೂರು), ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ (ಗರ್ವಾಲೆ, ಹರದೂರು, ಮಾದಾಪುರ, ಸುಂಟಿಕೊಪ್ಪ, ನಾಕೂರು-ಶಿರಂಗಾಲ, ಚೆಟ್ಟಳ್ಳಿ, ಕೆದಕಲ್, ಕಂಬಿಬಾಣೆ, ಕೊಡಗರಹಳ್ಳಿ ಮತ್ತು 7ನೇ ಹೊಸಕೋಟೆ), ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ತಮ್ಮಯ್ಯ (ಚೆಂಬೆಬೆಳ್ಳೂರು, ಬಿಟ್ಟಂಗಾಲ, ಕಾಕೋಟುಪರಂಬು, ಬೇಟೋಳಿ, ಆರ್ಜಿ, ಕೆದಮುಳ್ಳೂರು, ಕದನೂರು ಮತ್ತು ಬಿಳುಗುಂದ), ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜು (ಕಣ್ಣಂಗಾಲ, ಹಾಲುಗುಂದ, ಸಿದ್ದಾಪುರ, ಅಮ್ಮತ್ತಿ, ಕಾರ್ಮಾಡು, ಹೊಸೂರು, ಪಾಲಿಬೆಟ್ಟ, ಮಾಲ್ದಾರೆ ಮತ್ತು ಹಾತೂರು), ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ್ (ದೇವರಪುರ, ತಿತಿಮತಿ, ಮಾಯಮುಡಿ, ಅರುವತ್ತೋಕ್ಲು, ಬಿ. ಶೆಟ್ಟಿಗೇರಿ, ಕಿರುಗೂರು, ಬಾಳೆಲೆ, ಪೊನ್ನಪ್ಪಸಂತೆ ಮತ್ತು ನಿಟ್ಟೂರು), ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಶಿವ ಕುಮಾರ್ (ಟಿ. ಶೆಟ್ಟಿಗೇರಿ, ಕಾನೂರು, ಬಲ್ಯಮಂಡೂರು, ಹುದಿಕೇರಿ, ಬಿರುನಾಣಿ, ನಾಲ್ಕೇರಿ, ಕೆ. ಬಾಡಗ, ಶ್ರೀಮಂಗಲ ಮತ್ತು ಕುಟ್ಟ), ಇವರನ್ನು ಗ್ರಾ.ಪಂ. ವ್ಯಾಪ್ತಿಯ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.