ಮಡಿಕೇರಿ, ಡಿ. 4: ಮಡಿಕೇರಿ ತಾಲೂಕು ಎಮ್ಮೆಮಾಡು ಪಡಿಯಾಣಿ ಗ್ರಾಮದ ಯುವಕನೊಬ್ಬನನ್ನು ಮೈಸೂರಿಗೆ ಕರೆದೊಯ್ದು ಯುವತಿಯೋರ್ವಳನ್ನು ತೋರಿಸಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪತ್ತೆಹಚ್ಚುವಲ್ಲಿ ಕೊಡಗು ಡಿಸಿಐಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ 2019ನೇ ಸಾಲಿನ ಸೆಪ್ಟೆಂಬರ್ ತಿಂಗಳಿನಲ್ಲಿ ಎಮ್ಮೆಮಾಡು ಪಡಿಯಾಣಿ ಗ್ರಾಮದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಮನೆ ನಿರ್ಮಾಣಕ್ಕಾಗಿ ಹಣದೊಂದಿಗೆ ಊರಿಗೆ ಬಂದ ವಿಚಾರವನ್ನು ಉಪಯೋಗಿಸಿಕೊಂಡ ಎಮ್ಮೆಮಾಡಿನ ಎಂ.ಎಂ. ಅಬ್ದುಲ್ ಕರೀಂ ಹಾಗೂ ಆತನ ಸ್ನೇಹಿತರು ಯುವಕನನ್ನು ಉಪಾಯದಿಂದ ಮೈಸೂರಿಗೆ ಕರೆದುಕೊಂಡು ಹೋಗಿ ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗೆ ಪಡೆದು ಆ ಮನೆಗೆ ಯುವತಿಯೋರ್ವಳನ್ನು ಕರೆಯಿಸಿ ಹಣ ದರೋಡೆ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ಕೊಡಗು ಡಿಸಿಐಬಿ ಘಟಕದ ಪೊಲೀಸರು ಸುಮಾರು ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಮ್ಮೆಮಾಡಿನ ರಿಯಾಜ್ ಎಂಬಾತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಳಪಡಿಸಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ದರೋಡೆ ಮಾಡಲು ಬಳಸಿದ ಬೆಂಗಳೂರು ಮೂಲದ ಕಾರು ಹಾಗೂ ಕಾರಿನ ಮಾಲೀಕರ ಪತ್ತೆಗೆ ಡಿಸಿಐಬಿ ಪೊಲೀಸರು ಬಲೆಬೀಸಿದ್ದಾರೆ.