ಚೆಟ್ಟಳ್ಳಿ, ನ. 3: ಇತಿಹಾಸ ಪ್ರಸಿದ್ಧವಾದ ಕುರುಳಿಅಂಬಲ ಕೋಲ್‍ಮಂದ್‍ನಲ್ಲಿ ತಾ. 5 ರಂದು ಪುತ್ತರಿಕೋಲ್ ನಡೆಯಲಿದೆ.

ಪುತ್ತರಿ ನಮ್ಮೆಗೆ ಮುಂಚಿತವಾಗಿ ಈಡ್ ತೆಗೆದು ತಾ. 3 ರಂದು ಬೆಳಿಗ್ಗೆ ತಕ್ಕಮುಖ್ಯಸ್ಥರ ಮುಂದಾಳತ್ವದಲ್ಲಿ ಮಂದ್ ತೆರೆಯಲಾಯಿತು. ನಂತರದಲ್ಲಿ ನಿತ್ಯವೂ ಊರಿನವರು ಕೋಲಾಟ ನಡೆಸುವರು. ತಾ. 5 ರಂದು ಮಧ್ಯಾಹ್ನ ತಕ್ಕರ ಮನೆಗೆ ತೆರಳಿ ಊರಿನ ಮರ್ಯಾದೆ ಸಂಪ್ರದಾಯದೊಂದಿಗೆ ಮಂದ್‍ಗೆ ತಕ್ಕರನ್ನು ಕರೆತರುವರು. ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಪುತ್ತರಿ ಕೋಲಾಟ ಪ್ರದರ್ಶನ. ತಾ.6ರಂದು ವಿಷ್ಣುಮೂರ್ತಿ ಪೂಜೆ ನಡೆದು ರಾತ್ರಿ ದೇವನೆಲೆಯಲ್ಲಿ ಕೋಲನ್ನು ಒಪ್ಪಿಸುವರು. ಕುರುಳಿ ಅಂಬಲಕೋಲ್ ಮಂದಿನಲ್ಲಿ ಕೋಲನ್ನು ಒಪ್ಪಿಸಿದ ನಂತರ ಎಲ್ಲೂ ಕೋಲ್ ಹೊಡೆಯಬಾರದೆಂಬ ನಿಯಮ ತಲತಲಾಂತರದಿಂದ ನಡೆದು ಬಂದಿದೆ.

ಕೋವಿಡ್ ಇರುವುದರಿಂದ ಹಲವು ನಾಡುಗಳು ಸೇರಿ ಆಚರಿಸುತ್ತಾ ಬರುತ್ತಿರುವ ಪುತ್ತರಿ ಕೋಲಾಟವನ್ನು ಈ ವರ್ಷ ಸ್ಥಳೀಯ ಊರಿನವರು ಸೇರಿ ಆಚರಿಸುವಂತೆ ತೀರ್ಮಾನಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.