ಗೋಣಿಕೊಪ್ಪಲು, ಡಿ. 3: ವಿಧಾನ ಸೌಧದ ಎಸಿ ರೂಂನಲ್ಲಿ ಕುಳಿತು ರೈತರ ಬಗ್ಗೆ ಮಾತನಾಡಿದರೆ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ರೈತರ ಉದ್ದಾರವು ಸಾಧ್ಯವಿಲ್ಲ, ಕೃಷಿ ಖಾತೆಯು ಮುಳ್ಳಿನ ಹಾಸಿಗೆಯಾಗಿದೆ. ರೈತ ಕುಟುಂಬದಿಂದ ಬಂದ ನಾನು ಆಸಕ್ತಿಯಿಂದ ಕೃಷಿ ಖಾತೆಯನ್ನು ಕೇಳಿ ಪಡೆದಿದ್ದೇನೆ. ನನ್ನ ಅವಧಿಯಲ್ಲಿ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ರೈತರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಗೋಣಿಕೊಪ್ಪಲು, ಡಿ. 3: ವಿಧಾನ ಸೌಧದ ಎಸಿ ರೂಂನಲ್ಲಿ ಕುಳಿತು ರೈತರ ಬಗ್ಗೆ ಮಾತನಾಡಿದರೆ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ, ರೈತರ ಉದ್ದಾರವು ಸಾಧ್ಯವಿಲ್ಲ, ಕೃಷಿ ಖಾತೆಯು ಮುಳ್ಳಿನ ಹಾಸಿಗೆಯಾಗಿದೆ. ರೈತ ಕುಟುಂಬದಿಂದ ಬಂದ ನಾನು ಆಸಕ್ತಿಯಿಂದ ಕೃಷಿ ಖಾತೆಯನ್ನು ಕೇಳಿ ಪಡೆದಿದ್ದೇನೆ. ನನ್ನ ಅವಧಿಯಲ್ಲಿ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ರೈತರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

(ಮೊದಲ ಪುಟದಿಂದ)

ಆತ್ಮಹತ್ಯೆ ಬೇಡ

ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ರೈತರ ಸಭೆಗಳನ್ನು ಕರೆದು ಸಮಗ್ರ ಚರ್ಚೆ ಮಾಡುವ ಮೂಲಕ ರೈತನಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿತನ ಬಿಟ್ಟು ಧೈರ್ಯದಿಂದ ಸಮಗ್ರ ಕೃಷಿ ಚಟುವಟಿಕೆ ಅಳವಡಿಸಿಕೊಳ್ಳುವ ಮೂಲಕ ತನ್ನ ಆದಾಯವನ್ನು ವೃದ್ಧಿಸಿಕೊಳ್ಳಬಹುದು. ಕೃಷಿಯನ್ನು ನಂಬಿ ಕೆಟ್ಟವರಿಲ್ಲ, ಭೂಮಿಯಲ್ಲಿ ಕೃಷಿ ಮಾಡುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಕೊಳ್ಳುವುದರಿಂದ ಉತ್ತಮ ಬೀಜ ಬಿತ್ತುವುದರಿಂದ ಫಲವತ್ತಾದ ಭೂಮಿಯಿಂದ ಉತ್ತಮ ಬೆಳೆ ಬೆಳೆಯಬಹುದು. ರೈತರೇ ನೇರವಾಗಿ ಮಾರುಕಟ್ಟೆಗೆ ತೆರಳಿ ತಮ್ಮ ಕೃಷಿ ಪದಾರ್ಥಗಳನ್ನು ಮಾರಾಟ ಮಾಡಬೇಕು. ಕೆ.ಎಂ.ಎಫ್. ಮಾದರಿಯಲ್ಲಿ ತಾವೇ ಗುಂಪುಗಳನ್ನು ರಚಿಸಿಕೊಂಡು ಆ ಮೂಲಕ ತಾವು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬೇಕು ಎಂದು ಹೇಳಿದ ಸಚಿವರು; ‘ಈಸಬೇಕು; ಇದ್ದು ಜಯಿಸಬೇಕು’ ಎಂಬ ದಾಸರ ನುಡಿಯನ್ನು ಉಲ್ಲೇಖಿಸಿದರು.

ನಮ್ಮ ರಾಜ್ಯದ ಕೋಲಾರದಲ್ಲಿ ಸಾವಿರ ಅಡಿ ಆಳದಲ್ಲಿ ನೀರು ಸಿಕ್ಕಿದರೂ, ಇದನ್ನು ಬಳಸಿಕೊಂಡು ಈ ಭಾಗದ ರೈತರು ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದೆ. ಆದರೆ ನೀರಾವರಿ ಇರುವ ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಸರಿಯಲ್ಲ. ನಮಗೆ ಇಸ್ರೇಲ್ ರಾಷ್ಟ್ರ ಮಾದರಿಯಲ್ಲ; ನಮ್ಮ ಕೋಲಾರ ಜಿಲ್ಲೆಯೇ ಮಾದರಿಯಾಗಿದೆ. ಕೃಷಿ ಭೂಮಿಯಲ್ಲಿ ತೋಟಗಾರಿಕಾ ಬೆಳೆಗಳು ಸೇರಿದಂತೆ ಅನೇಕ ಬೆಳೆಗಳನ್ನು ಸಂದರ್ಭಕ್ಕೆ ಸರಿಯಾಗಿ ರೈತರು ಬೆಳೆಯಬೇಕು. ಅನವಶ್ಯಕ ಗೊಬ್ಬರಗಳನ್ನು ಸಿಂಪಡಿಸದೆ ಸಾವಯವ ಗೊಬ್ಬರಗಳನ್ನು ಬಳಸಿ ಕೃಷಿ ಚಟುವಟಿಕೆ ನಡೆಸಬೇಕು. ಬಿದಿರನ್ನು ಬೆಳೆಯುವ ಮೂಲಕ ರೈತರು ಹೆಚ್ಚಿನ ಲಾಭ ಪಡೆಯಬೇಕು. ಅರಣ್ಯದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ನೀರಿನ ತೇವಾಂಶವನ್ನು ಕಾಪಾಡಬೇಕು ಎಂದು ಹೇಳಿದರು. ಭತ್ತ ಬೆಳೆದ ರೈತ ಎಂದಿಗೂ ಶ್ರೀಮಂತನಾಗಿಲ್ಲ. 120 ದಿನಗಳು ಭೂಮಿಯನ್ನು ಉತ್ತಿ ಬೆಳೆದ ನಂತರ ಬಂದ ಫಸಲಿನಿಂದ ಲಾಭದಾಯಕವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈತನಿಗೆ ಉತ್ತಮ ಬೆಲೆ ಸಿಗಲು ಪ್ರಯತ್ನ ಮಾಡಲಾಗುವುದು ಈ ಬಗ್ಗೆ ತಜ್ಞರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ಅಭಿಲಾಷೆ ವ್ಯಕ್ತಪಡಿಸಿದರು.

-ಹೆಚ್.ಕೆ. ಜಗದೀಶ್, ಚನ್ನನಾಯಕ