ಕೂಡಿಗೆ, ಡಿ. 3: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕುಶಾಲನಗರ ನಾಡ ಕಚೇರಿಯಲ್ಲಿ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಚಾಲನೆ ನೀಡಿದರು. ನಂತರ ಮಾತಾಡುತ್ತಾ ಕಂದಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಗ್ರಾಮಾಂತರ ಪ್ರದೇಶದ ರೈತರು ನೀಡುವ ಅರ್ಜಿಗಳನ್ನು ಸಕಾಲದ ಮೂಲಕ ಐದು ದಿನಗಳಲ್ಲಿ ಕ್ರಮಬದ್ಧವಾಗಿ ಆಯಾ ವ್ಯಕ್ತಿಗೆ ತಲುಪಲು ಪ್ರಯತ್ನ ಮಾಡುವುದು ಪ್ರಮುಖ ಉದ್ದೇಶವಾಗಿರುತ್ತದೆ. ಇದನ್ನು ನಿರ್ವಹಿಸಲು ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಕುಶಾಲನಗರ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪೌತಿ ಖಾತೆ ಸೇರಿದಂತೆ ವಿವಿಧ ಕಂದಾಯ ಇಲಾಖೆಯ ಕಾರ್ಯಕ್ರಮಗಳ ನಡೆದಿದ್ದು, ಅನೇಕ ಅರ್ಜಿಗಳು ಬಂದಿವೆ. ಇವುಗಳನ್ನು ಶೀಘ್ರ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಕುಶಾಲನಗರ ಕಂದಾಯ ಪರಿವೀಕ್ಷಕ ಸಂತೋಷ ಮತ್ತು ಹೋಬಳಿ ವ್ಯಾಪ್ತಿಯ ಎಲ್ಲಾ ವಿಭಾಗದ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.