ಮಡಿಕೇರಿ, ಡಿ.2 : ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ತೆರ್ಮೆಕಾಡು ಪೈಸಾರಿಯಲ್ಲಿ ಗೋಮಾಳದ ಅತಿಕ್ರಮಣ ತೆರವಿನ ನೆಪದಲ್ಲಿ ಕಡು ಬಡವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ, ಅಮಾಯಕರಿಗೆ ಕಿರುಕುಳ ನೀಡಿದರೆ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತೆರವು ಕಾರ್ಯಾಚರಣೆ ನಡೆಸಿದ ಸ್ಥಳಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಗೋವುಗಳ ಮೇಲಿರುವ ಅನುಕಂಪ ಮನುಷ್ಯರ ಮೇಲೆ ಯಾಕಿಲ್ಲವೆಂದು ಪ್ರಶ್ನಿಸಿದರು.

ಹಗಲಿನಲ್ಲಿ ತೆರವು ಕಾರ್ಯಾಚರಣೆ ನಡೆಸಿದ ನಂತರ ಮತ್ತೆ ರಾತ್ರಿ ವೇಳೆಯಲ್ಲಿ ಕೆಲವು ಸಂಘಟನೆಗಳ ಕಾರ್ಯಕರ್ತರು ಪೈಸಾರಿಗೆ ದಾಳಿ ಮಾಡಿ ಬಡವರನ್ನು ಗುಡಿಸಲುಗಳಿಂದ ಹೊರ ಹಾಕಿದ್ದಾರೆ. ಇದು ಮೃಗೀಯ ವರ್ತನೆಯಾಗಿದ್ದು, ಇದಕ್ಕೆ ಅಧಿಕಾರಿಗಳ ಕುಮ್ಮಕ್ಕು ಇರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ ಎಂದು ಆರೋಪಿಸಿದರು.

ಕಡು ಬಡತನದಲ್ಲಿರುವ ಮಿನಿ ಡಿಸೋಜ ಮತ್ತು ತಂದೆ, ತಾಯಿಯಂದಿರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಾದ ಪೂಜಾ ಹಾಗೂ ಪುನೀತ್ ಅವರುಗಳ ಗುಡಿಸಲನ್ನು ಬಲವಂತವಾಗಿ ತೆರವುಗೊಳಿಸಲು ಪ್ರಯತ್ನಿಸಿ ಹಾನಿ ಮಾಡಲಾಗಿದೆ. ಅತ್ಯಂತ ಖಂಡನೀಯ ಘಟನೆ ಇದಾಗಿದೆ. ಕಾನೂನನ್ನು ಕೈಗೆ ತೆಗೆದುಕೊಂಡ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮೊದಲು ಮಾನವರಾಗಿ ಮನುಷ್ಯರ ನೋವನ್ನು ಅರಿತುಕೊಳ್ಳಿ, ನಂತರ ಗೋಮಾಳವನ್ನು ಉಳಿಸಿಕೊಳ್ಳಿ ಎಂದು ಆಗ್ರಹಿಸಿದ ಅವರು, ಕಡುಬಡವರನ್ನು ಪೈಸಾರಿಯಿಂದ ತೆರವುಗೊಳಿಸಿದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಮಾತನಾಡಿ ದೌರ್ಜನ್ಯ ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು.

ಮಡಿಕೇರಿ ತಾಲೂಕು ಸಂಚಾಲಕ ಎ.ಪಿ.ದೀಪಕ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ಪರಿಶಿಷ್ಟರು, ದುರ್ಬಲರು, ಕಡು ಬಡವರು ಹಾಗೂ ಕೂಲಿ ಕಾರ್ಮಿಕರ ಮೇಲಿನ ದೌರ್ಜನ್ಯ ಇನ್ನೂ ಕೂಡ ನಿಂತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಮಾನತೆಯ ಪರಿಕಲ್ಪನೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಈ ದೇಶಕ್ಕೆ ಕೊಡುಗೆಯಾಗಿ ನೀಡಿದರು. ಆದರೆ ಬಲಾಡ್ಯರು ಬಡವರ ಮೇಲೆ ದೌರ್ಜನ್ಯ ನಡೆಸುವ ಮೂಲಕ ಸಂವಿಧಾನದ ಆಶಯಗಳಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಅತಿಕ್ರಮಣವಾಗಿದ್ದರೂ ಕಡು ಬಡವರ ಗುಡಿಸಲುಗಳನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವಿವಿಧ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಿಕೊಡಬೇಕೆಂದು ದೀಪಕ್ ಒತ್ತಾಯಿಸಿದರು. ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.