ಕೂಡಿಗೆ, ಡಿ. 2: ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ್ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಕಿ ಟರ್ಫ್ ಮೈದಾನ ವೀಕ್ಷಿಸಿ ಉಳಿದ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಕ್ರೀಡಾ ಶಾಲೆಯ 400 ಮೀಟರ್ ಓಟದ ಅಥ್ಲೆಟಿಕ್ಸ್ ಮೈದಾನ ಹಾಗೂ ಈಗಾಗಲೇ ಮಳೆಯಿಂದಾಗಿ ಹಾನಿಗೊಳಗಾದ ಕೆಲ ಸ್ಥಳ ಪರಿಶೀಲಿಸಿದರು. ಕ್ರೀಡಾ ಶಾಲೆಯ ಒಳ ಕ್ರೀಡಾಂಗಣದಲ್ಲಿನ ಸಮಸ್ಯೆಗಳನ್ನು ತಿಳಿದು ಸರಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭವಾದ ಸರಕಾರಿ ಕ್ರೀಡಾ ಪ್ರೌಢಶಾಲೆ ಇದಾಗಿದ್ದು, ಇದರ ಅಭಿವೃದ್ಧಿಗೆ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆಯಿತ್ತರು.

ಈ ಸಂದರ್ಭ ಶಿವಮೊಗ್ಗ ಜಿಲ್ಲೆಯ ದೈಹಿಕ ನಿರ್ದೇಶಕ ಸದಾನಂದ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕಿ ಕುಂತಿ, ಸಹಾಯಕ ಶಿಕ್ಷಕ ದೇವಕುಮಾರ್, ಅಥ್ಲೆಟಿಕ್ ತರಬೇತುದಾರ ಅಂತೋಣಿ ಡಿಸೋಜ, ಹಾಕಿ ತರಬೇತಿದಾರ ವೆಂಕಟೇಶ, ಎ. ಮಂಜು ಶಿಕ್ಷಕರಾದ ಮುರುಳಿ ಅಶ್ವಿನಿ ಸವಿತ ದಯಾನಂದ ಹಾಜರಿದ್ದರು.