ಪೆÇನ್ನಂಪೇಟೆ, ಡಿ. 2: ಕಾನೂರುವಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಕಾನೂರು ಹಾಗೂ ಕೋತೂರುವಿನ ಯುವಕರ ತಂಡ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕಾನೂರು ಪ್ರೀಮಿಯರ್ ಲೀಗ್-2020ರ ಚಾಂಪಿಯನ್ ಪಟ್ಟವನ್ನು ಹರಿಹರ ಪ್ಯಾಂಥರ್ಸ್ ಇಲೆವೆನ್ ತಂಡ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಕಾನೂರಿನ ಡ್ರೀಮ್ ಇಲೆವೆನ್ ತಂಡದ ವಿರುದ್ಧ ನಿಗದಿತ 5 ಓವರ್‍ಗಳಲ್ಲಿ 43 ರನ್‍ಗಳಿಸಿದ ಪ್ಯಾಂಥರ್ಸ್ ಇಲೆವೆನ್ ಡ್ರೀಮ್ ಇಲೆವೆನ್ ತಂಡಕ್ಕೆ 44 ರನ್‍ಗಳ ಗುರಿ ನೀಡಿತು. ಕೊನೆಯ ಎಸೆತದವರೆಗೂ ರೋಚಕತೆ ಮೂಡಿಸಿದ್ದ ಪಂದ್ಯದಲ್ಲಿ ಗುರಿ ಬೆನ್ನಟ್ಟಿದ ಕಾನೂರಿನ ಡ್ರೀಮ್ ಇಲೆವೆನ್ ತಂಡ ನಿಗದಿತ ಓವರ್‍ಗಳಲ್ಲಿ 37 ರನ್‍ಗಳಿಸಿ ಸೋಲೊಪ್ಪಿಕೊಳ್ಳುವ ಮೂಲಕ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಡ್ರೀಮ್ ಇಲೆವೆನ್ ತಂಡದ ಜೀವನ್, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಅನಿಲ್ ಜೋಯಪ್ಪ, ಬೆಸ್ಟ್ ಬೌಲರ್ ಆಗಿ ಸಫೀಕ್, ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಪ್ಯಾಂಥರ್ಸ್ ಇಲೆವೆನ್ ತಂಡದ ತರುಣ್ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ಮೊದಲ ಅರ್ಧ ಶತಕಗಳಿಸಿದ ಸೂಪರ್ ಸ್ಟ್ರೈಕರ್ ತಂಡದ ಬೋಪಣ್ಣ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡರು. ಕಾನೂರು ವ್ಯಾಪ್ತಿಯಲ್ಲಿರುವ 8 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರಶಾಂತ್, ರಾಹುಲ್, ರೋಷನ್, ರಾಜ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಚನ್ನನಾಯಕ ವೀಕ್ಷಕ ವಿವರಣೆ ನೀಡಿದರು.