ರಕ್ಷಣೆ ಕೋರಿದ ಮಾಜಿ ಸಚಿವ ವರ್ತೂರು

ಬೆಂಗಳೂರು, ಡಿ. 2: ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಲಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕುಟುಂಬಕ್ಕೆ ಜೀವ ಬೆದರಿಕೆಯಿದ್ದು, ತಮಗೆ ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ. ಪ್ರಕರಣ ನಡೆದ ಬಗ್ಗೆ ಅವರಿಗೆ ವಿವರಿಸಿದ್ದೇನೆ, ತಮಗೆ ಹಾಗೂ ಮಕ್ಕಳಿಗೆ ರಕ್ಷಣೆ ಬೇಕು ಎಂದು ಕೇಳಿದ್ದೇನೆ ಎಂದು ತಿಳಿಸಿದರು. ಈ ನಡುವೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ತನಿಖೆಗೆ ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ವಿಶೇಷ ಪೆÇಲೀಸ್ ತಂಡಗಳನ್ನು ರಚಿಸಲಾಗಿದೆ.

ಪಟಾಕಿ ಸಂಪೂರ್ಣ ನಿಷೇಧಕ್ಕೆ ನಿರ್ದೇಶನ

ನವದೆಹಲಿ, ಡಿ. 2: ಕೊರೊನಾ ಸೋಂಕು ಹೆಚ್ಚಾಗಿರುವ, ಗಾಳಿಯ ಗುಣಮಟ್ಟ ಕಳಪೆಯಾಗಿರುವ ದೆಹಲಿ ಹಾಗೂ ಸುತ್ತಮತ್ತಲಿನ ನಗರ-ಪಟ್ಟಣಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿರುವ ಇತರೆ ಕಡೆಯಲ್ಲೂ ಎಲ್ಲ ಬಗೆಯ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಹಸಿರು ನ್ಯಾಯಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠ ಈ ಬಗ್ಗೆ ನಿರ್ದೇಶನ ನೀಡಿದೆ. ಗಾಳಿಯ ಗುಣಮಟ್ಟ ಮಧ್ಯಮ ಪ್ರಮಾಣಕ್ಕಿಂತಲೂ ಕಡಿಮೆ ಇರುವ ನಗರಗಳಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ಕೊಡಬಾರದು ಎಂಬ ಷರತ್ತು ಹಾಕಿದೆ. ಗಾಳಿಯ ಗುಣಮಟ್ಟ ಮಧ್ಯಮ ಹಂತದಲ್ಲಿರುವ ನಗರ-ಪಟ್ಟಣದಲ್ಲಿ ಮಾತ್ರ ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ ಕೆಲ ಸಮಯದವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಲಾಗಿದೆ. ಒಂದು ವೇಳೆ ನಿಷೇಧಿತ ಪಟಾಕಿಗಳ ಮಾರಾಟವಾಗುತ್ತಿದ್ದರೆ ಅವುಗಳನ್ನು ಕೂಡಲೇ ವಶಕ್ಕೆ ತೆಗೆದುಕೊಂಡು ಅವರಿಗೆ ದಂಡ ಹಾಕಬೇಕು ಎಂದೂ ಪೀಠ ಎಚ್ಚರಿಸಿದೆ.

ರಾಷ್ಟ್ರಗೀತೆ ಬದಲಾವಣೆಗೆ ಸ್ವಾಮಿ ಪತ್ರ

ನವದೆಹಲಿ, ಡಿ. 2: ನಮ್ಮ ರಾಷ್ಟ್ರಗೀತೆ ಜನ ಗಣ ಮನವನ್ನು ಬದಲಾಯಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಇರುವ ರಾಷ್ಟ್ರಗೀತೆಯನ್ನು ಬದಲಾಯಿಸಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಬರೆದಿರುವ ಪತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಗೀತೆಯಲ್ಲಿ ಕೆಲ ಅನಗತ್ಯ ಪದಗಳು ಸೇರಿಕೊಂಡಿವೆ, ಗೀತೆಯಲ್ಲಿರುವ ಕೆಲವು ಪದಗಳಿಗೆ ಸಂಬಂಧಿಸಿದ ಪ್ರದೇಶಗಳು ಪಾಕಿಸ್ತಾನದಲ್ಲಿರುವುದರಿಂದ ಆ ಅನಗತ್ಯ ಪದಗಳನ್ನು ರಾಷ್ಟ್ರಗೀತೆಯಿಂದ ತೆಗೆದುಹಾಕುವಂತೆ ಕೋರಿ ಸುಬ್ರಮಣ್ಯಸ್ವಾಮಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜನಗಣಮನ ಗೀತೆ ಹಾಡಿದಾಗ ಯಾರನ್ನೂ ಪ್ರಶಂಸಿಸಿ ಬರೆಯಲಾಗಿದೆ ಎಂಬ ಅನುಮಾನವನ್ನು ಡಾ. ಸ್ವಾಮಿ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಆ ಸ್ಥಾನದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿ 1943ರ ಅಕ್ಟೋಬರ್ 21 ರಂದು ಇಂಫಾಲ್ ಅನ್ನು ವಶಪಡಿಸಿಕೊಂಡಾಗ ಹಾಡಿದ ಗೀತೆಯನ್ನು ಜಾರಿಗೊಳಿಸಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.

ಲಾರಿ-ಕಾರು ಡಿಕ್ಕಿಯಾಗಿ 6 ಸಾವು

ಹೈದರಾಬಾದ್, ಡಿ. 2: ಇನ್ನೋವಾ ಕಾರೊಂದು ಬುಧವಾರ ಬೋರ್‍ವೆಲ್ ಕೊರೆಯುವ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಹೈದರಾಬಾದ್ ಸಮೀಪದ ಚೆವೆಲ್ಲಾ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು 46 ವರ್ಷದ ಮೊಹಮ್ಮದ್ ಆಸಿಫ್ ಖಾನ್, ಬಹದ್ದೂರ್ಪುರದ ನಿವಾಸಿಯಾಗಿದ್ದ ವೆಲ್ಡರ್, ಅವರ ಪತ್ನಿ ಫೌಸಿಯಾ ಬೇಗಂ (40) ಮಗಳು ಮೆಹಕ್ ಸಾನಿಯಾ (18), ನಾಜಿಯಾ ಬೇಗಂ (30), ಕಲಾಪಥರ್ ನಿವಾಸಿ, ಹರ್ಸಿಯಾ ಬೇಗಂ (28) ಮತ್ತು ಅವರ ನಾಲ್ಕು ವರ್ಷದ ಮಗಳು ಆಶಾ ನಿವಾಸಿ ಎಂದು ಗುರುತಿಸಲಾಗಿದೆ. ಮೃತರು ನಗರದಿಂದ ಕರ್ನಾಟಕದ ಗುರ್ಮಿಟಕಲ್‍ಗೆ ಇನ್ನೋವಾದಲ್ಲಿ ತೆರಳುತ್ತಿದ್ದರು. ಕಾರು ಕಂದವಾಡ ಗೇಟ್ ತಲುಪುತ್ತಿದ್ದಂತೆ ಭಾರೀ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ, ಕಾರು ಸಂಪೂರ್ಣವಾಗಿ ಹಾನಿಯಾಗಿದ್ದು, ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.

ಕೊನೆಗೂ ಗೆದ್ದ ಟೀಂ ಇಂಡಿಯಾ

ಕ್ಯಾನ್‍ಬೆರಾ, ಡಿ. 2: ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‍ಗಳಿಂದ ಗೆದ್ದು ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ. ಬುಧವಾರ ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 302 ರನ್ ಕಲೆಹಾಕುವ ಮೂಲಕ ಅತಿಥೇಯ ಅಸೀಸ್‍ಗೆ ಗೆಲ್ಲಲು 303 ರನ್ ಗುರಿ ನೀಡಿತ್ತು. ಭಾರತ ನೀಡಿದ 303 ರನ್‍ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 289 ರನ್‍ಗಳಿಗೆ ಆಲೌಟ್ ಆಗುವ ಮೂಲಕ 13 ರನ್‍ಗಳಿಂದ ಭಾರತಕ್ಕೆ ಶರಣಾಗಿದೆ. ಆಸ್ಟ್ರೇಲಿಯಾ ಪರ ಆರೋನ್ ಪಿಂಚ್ 75, ಹೆನ್ರಿಕ್ಸ್ 22, ಗ್ರೀನ್ 21, ಕೆರ್ರಿ 38, ಮ್ಯಾಕ್ಸ್ ವೆಲ್ 59, ಅಗರ್ 28 ರನ್ ಬಾರಿಸಿದ್ದಾರೆ. ಭಾರತ ಪರ ಬೌಲಿಂಗ್‍ನಲ್ಲಿ ಶಾರ್ದೂಲ್ ಠಾಕೂರ್ 3, ಜಸ್ ಪ್ರೀತ್ ಬುಮ್ರಾ, ನಟರಾಜನ್ ತಲಾ 2 ವಿಕೆಟ್ ಪಡೆದಿದ್ದಾರೆ.

ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರ

ನವದೆಹಲಿ, ಡಿ. 2: ಐಸಿಸಿ ಟಿ-20 ಕ್ರಿಕೆಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಅಗ್ರಸ್ಥಾನಕ್ಕೇರಿದ್ದು ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ಮೂಲಕ, ಇಂಗ್ಲೆಂಡ್ ಟಿ-20 ಶ್ರೇಯಾಂಕದಲ್ಲಿ ಪ್ರಥಮ ಸ್ಥಾನದಲ್ಲಿದೆ. ಟಿ20 ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಇಂಗ್ಲೆಂಡ್ 271 ಪಾಯಿಂಟ್‍ಗಳನ್ನು ಹೊಂದಿತ್ತು ಮತ್ತು ಸರಣಿಯನ್ನು ಗೆದ್ದ ನಂತರ 275ಕ್ಕೆ ಏರಿದೆ. ಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು 266 ಅಂಕ ಗಳಿಸಿರುವ ಭಾರತ ಮೂರನೇ ಸ್ಥಾನ, ಪಾಕಿಸ್ತಾನ ನಾಲ್ಕನೇ, ದಕ್ಷಿಣ ಆಫ್ರಿಕಾ ಐದನೇ ಮತ್ತು ನ್ಯೂಜಿಲೆಂಡ್ ಆರನೇ ಸ್ಥಾನದಲ್ಲಿದೆ.