ಕುಶಾಲನಗರ, ಡಿ. 2: ಕುಶಾಲನಗರ ಪ.ಪಂ.ಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸದ್ಯದಲ್ಲಿಯೇ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಅವರು, ಅಧ್ಯಕ್ಷ ಜೈವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಶಾಲನಗರ ಪಟ್ಟಣ ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕುಶಾಲನಗರ ಪಟ್ಟಣ ಸೇರಿದಂತೆ ನೆರೆಯ ಮುಳ್ಳುಸೋಗೆ, ಮಾದಾಪಟ್ಟಣ ಗ್ರಾಮ ಮತ್ತು ಭಾಗಶಃ ಗೊಂದಿಬಸವನಹಳ್ಳಿ ಪುರಸಭೆ ವ್ಯಾಪ್ತಿಗೆ ಬರಲಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ವರದಿ ಸರಕಾರದ ಕೈಸೇರಿದ್ದು ತಾಂತ್ರಿಕ ವರದಿ ಸಿದ್ಧವಾಗಬೇಕಿದೆ ಎಂದರು.
ಕುಶಾಲನಗರ ನೂತನ ತಾಲೂಕು ಅಧಿಕೃತವಾಗಿ ಮುಂದಿನ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದ್ದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ನಡೆದಿದೆ ಎಂದ ಶಾಸಕರು ಕುಶಾಲನಗರ ತಾಲೂಕಿಗೆ ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ರೂ. 10 ಕೋಟಿ ವೆಚ್ಚದಲ್ಲಿ ತಾ.ಪಂ. ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗೆ ಮಿನಿ ವಿಧಾನಸೌಧ ನಿರ್ಮಾಣವಾಗಲಿದೆ ಎಂದರು.
ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹ ತಡೆಗೆ ರೂ. 100 ಕೋಟಿ ವೆಚ್ಚದ ಯೋಜನೆಯೊಂದನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಈ ಕಾಮಗಾರಿ ಮೂಲಕ ಪಟ್ಟಣದ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ತಡೆಗೋಡೆ ನಿರ್ಮಾಣ ಕಾರ್ಯ ಆಗಲಿದೆ ಎಂದರು.
ಸಭೆಯಲ್ಲಿ ಪ.ಪಂ. ಸದಸ್ಯರು ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆ ಪ್ರಸ್ತಾಪವೆತ್ತಿ ಈ ಬಗ್ಗೆ ಕೆಲವು ನೌಕರರು ದಲ್ಲಾಳಿಗಳ ಮೂಲಕ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಪಂಚಾಯಿತಿಯ ಮೂವರು ನೌಕರ ರನ್ನು ತರಾಟೆಗೆ ತೆಗೆದುಕೊಂಡರು. ದಲ್ಲಾಳಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣ ಪಂಚಾಯ್ತಿಯ ನೂತನ ವಾಣಿಜ್ಯ ಸಂಕೀರ್ಣದಲ್ಲಿ ಕೆಲವು ವ್ಯಕ್ತಿಗಳು ಅಂಗಡಿ ಮಳಿಗೆಗಳನ್ನು ತೆರವುಗೊಳಿಸದೆ ಇರುವ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ಮೂಲ ಬಾಡಿಗೆ ದಾರರ ಹೊರತಾಗಿ ಉಳಿದಂತೆ ನೂತನ ಮಳಿಗೆಗಳಲ್ಲಿ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು. ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡಗಳಲ್ಲಿ ಇರುವ ವ್ಯಾಪಾರಿಗಳ ಒಪ್ಪಂದಪತ್ರ ಮುಗಿದು 21 ವರ್ಷ ಗಳಾದರೂ ಇನ್ನೂ ಕೆಲವರು ಅಕ್ರಮವಾಗಿ ಮಳಿಗೆಯಲ್ಲಿ ರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಕೆ.ಜಿ. ಮನು, ಕೂಡಲೆ ತೆರವುಗೊಳಿಸಬೇಕೆಂದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸದಸ್ಯ ಡಿ.ಕೆ.ತಿಮ್ಮಪ್ಪ, ಈಗ ಇರುವ ಕೆಲವು ವ್ಯಾಪಾರಿಗಳಲ್ಲಿ ದಾಖಲೆಗಳು ಇರುವುದಾಗಿ ಸಭೆಗೆ ತಿಳಿಸಿದರು. ಕುಶಾಲನಗರ ಪಟ್ಟಣದಲ್ಲಿ 1970ರ ಹಿಂದೆ ನಿರ್ಮಾಣವಾದ ಬಡಾವಣೆ ಗಳಿಗೆ ದಾಖಲೆಗಳು ಪಡೆಯಲು ಉಂಟಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ಹಿರಿಯ ಸದಸ್ಯೆ ರೇಣುಕಾ ಸಭೆಯ ಗಮನಕ್ಕೆ ತಂದರು.
ಫಾರಂ 3 ಹೆಸರಿನಲ್ಲಿ ಪಂಚಾಯಿತಿ ಸಿಬ್ಬಂದಿಗಳು ಹಲವು ಅಕ್ರಮ ಖಾತೆಗಳನ್ನು ಮಾಡುವ ಮೂಲಕ ವಂಚನೆ ಮಾಡುವುದ ರೊಂದಿಗೆ ನಾಗರಿಕರಿಂದ ಭಾರೀ ಮೊತ್ತದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು. ಬ್ರೋಕರ್‍ಗಳ ಮೂಲಕ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಸದಸ್ಯರಾದ ವಿ.ಎಸ್. ಆನಂದಕುಮಾರ್, ಅಮೃತ್‍ರಾಜ್, ನಾಮನಿರ್ದೇಶಿತ ಸದಸ್ಯರಾದ ಶಂಭುಲಿಂಗಪ್ಪ, ಕೆ.ಜಿ. ಮನು ಸಭೆಯ ಗಮನಕ್ಕೆ ತಂದಾಗ, ಮದ್ಯವರ್ತಿಗಳು ಬಂದ ಸಂದರ್ಭ ತಕ್ಷಣ ಕ್ರಮಕೈಗೊಳ್ಳಬೇಕೆಂದು ಶಾಸಕರು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ನಾಗರಿಕರನ್ನು ದಾಖಲೆಗಳನ್ನು ಕೇಳುವ ಹೆಸರಿನಲ್ಲಿ ಸತಾಯಿಸುತ್ತಿರುವ ಬಗ್ಗೆ, ಪಂಚಾಯಿತಿ ಯಲ್ಲಿ ಬಡಾವಣೆಗಳ ಮೂಲ ದಾಖಲಾತಿಗಳು ನಾಪತ್ತೆಯಾಗುತ್ತಿವೆ. ಕೆಲವು ಪ್ರಮುಖ ದಾಖಲೆಗಳು ಕೆಲವರ ಮನೆ ಸೇರಿರುವ ಬಗ್ಗೆ ಆನಂದ ಕುಮಾರ್ ಮತ್ತು ಶಂಭುಲಿಂಗಪ್ಪ ಸಭೆಯ ಗಮನಕ್ಕೆ ತಂದರು. ವಾಣಿಜ್ಯ ಸಂಕೀರ್ಣ ಕಾಮಗಾರಿಗೆ ಈಗಾಗಲೆ 2.1 ಕೋಟಿ ರೂ. ಪಾವತಿಯಾಗಿದ್ದು ಈ ಬಗ್ಗೆ ಮಾಹಿತಿ ಬಯಸಿದ ಅಮೃತ್‍ರಾಜ್, ಆದಷ್ಟು ಬೇಗನೆ ಕಟ್ಟಡ ಕಾಮಗಾರಿ ಮುಗಿಸುವಂತೆ ಕೋರಿದರು.
2007ರ ನಂತರ ಅಭಿವೃದ್ಧಿ ಗೊಂಡ ಬಡಾವಣೆಗಳಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಬಡಾವಣೆ ಮಾಲೀಕರೇ ಮಾಡಬೇಕು ಎಂದು ಸಭೆಗೆ ಒಳಚರಂಡಿ ಮತ್ತು ಕುಡಿವ ನೀರು ಸರಬರಾಜು ಮಂಡಳಿಯ ಅಧಿಕಾರಿ ಆನಂದ್ ತಿಳಿಸಿದರು. ಪ್ರವಾಹ ಸಂತ್ರಸ್ಥರಿಗೆ ದೊರಕಬೇಕಾದ ಪರಿಹಾರ ದೊರಕದಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಕೂಡಲೆ ಪಾವತಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಭೆಗೂ ಮುನ್ನ ಪಂಚಾಯ್ತಿ ವತಿಯಿಂದ ನೂತನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ರಚನೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ ಹಿರಿಯ ಸದಸ್ಯ ಡಿ.ಕೆ. ತಿಮ್ಮಪ್ಪ, ಹೋರಾಟಗಾರರಿಗೆ ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಇತ್ತೀಚೆಗೆ ಮೃತಪಟ್ಟ ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ ಅವರಿಗೆ ಸಭೆ ಸಂತಾಪ ಸೂಚಿಸಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಸುರಯ್ಯಭಾನು, ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ರೇಣುಕಾ, ಶೈಲಾಕೃಷ್ಣಪ್ಪ, ಜಗದೀಶ್, ದಿನೇಶ್, ಜಯಲಕ್ಷ್ಮಿ ಚಂದ್ರು, ಜಯಲಕ್ಷ್ಮಿ ನಂಜುಂಡಸ್ವಾಮಿ, ಪುಟ್ಟಲಕ್ಷ್ಮಿ, ಎಂ.ಬಿ. ಸುರೇಶ್, ವಿ.ಎಸ್. ಆನಂದಕುಮಾರ್, ಶೇಖ್ ಖಲೀಮುಲ್ಲಾ, ರೂಪಾ ಉಮಾಶಂಕರ್, ನಾಮನಿದೇರ್ಶಿತ ಸದಸ್ಯರಾದ ಕೆ.ಜಿ. ಮನು, ಶಂಭುಲಿಂಗಪ್ಪ, ಎಂ.ವಿ. ನಾರಾಯಣ, ಮುಖ್ಯಾಧಿಕಾರಿ ಸುಜಯ್‍ಕುಮಾರ್, ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ, ಅಭಿಯಂತರೆ ಶ್ರೀದೇವಿ, ಒಳಚರಂಡಿ ಮಂಡಳಿ ಅಭಿಯಂತರ ಆನಂದ್ ಇದ್ದರು.