ಕೂಡಿಗೆ, ಡಿ. 2: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ, ಸೀಗೆಹೊಸೂರು, ಮಾವಿನಹಳ್ಳ ಭಾಗಗಳಲ್ಲಿ ಕಳೆದ ರಾತ್ರಿ ಕಾಡಾನೆಗಳ ಹಿಂಡುದಾಳಿ ಮಾಡಿ ಭಾರೀ ನಷ್ಟಪಡಿಸಿವೆ.

ಹಾರಂಗಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆಸಲಾಗಿದ್ದ ಭತ್ತದ ಬೆಳೆಯನ್ನು ಹಗಲು ಅವರವರ ಜಮೀನಿನ ಗದ್ದೆಗಳಲ್ಲಿ ಕುಯಿಲು ಮಾಡಲಾಗಿತ್ತು. ಆದರೆ ರಾತ್ರಿ ಸಮಯ ಸೀಗೆಹೊಸೂರು ಗ್ರಾಮದ ಮೂಲಕ ಬಂದಿರುವ ಕಾಡಾನೆಗಳು ಕುಯ್ಲು ಮಾಡಿದ ಭತ್ತದ ಗದ್ದೆಗಳಲ್ಲಿ ಮನಬಂದಂತೆ ತುಳಿದು ತಿಂದು ಭಾರೀ ನಷ್ಟಪಡಿಸಿವೆ. ಮದಲಾಪುರ ಗ್ರಾಮದ ನಾಗರಾಜ್, ಕುಮಾರ, ಗಣೇಶ್, ಗಿರಿ ಎಂಬವರಿಗೆ ಸೇರಿದಂತೆ ಗದ್ದೆಗಳಲ್ಲಿ ನಷ್ಟಪಡಿಸಿವೆ. ವರ್ಷದ ಅನ್ನವನ್ನು ಒಂದೇ ರಾತ್ರಿಯಲ್ಲಿ ಹಾಳು ಮಾಡಿವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.