ಗೋಣಿಕೊಪ್ಪ ವರದಿ, ಡಿ. 2: ಕುರ್ಚಿ ಗ್ರಾಮದಲ್ಲಿ ಇತ್ತೀಚೆಗೆ ರಾತ್ರಿ ಕಾಡಾನೆಗಳ ಹಿಂಡು ನಡೆಸಿರುವ ದಾಂಧಲೆಯಿಂದಾಗಿ ರೈತ ಅಜ್ಜಮಾಡ ರವಿ ಚೆಂಗಪ್ಪ ಅವರಿಗೆ ಸೇರಿದ ಕಾಫಿ ತೋಟ, ಕೊಯ್ಲು ಮಾಡಿದ್ದ ಭತ್ತ ನಾಶವಾಗಿದೆ. ಸುಮಾರು ರೂ. 1.5 ಲಕ್ಷಕ್ಕೂ ಅಧಿಕ ನಷ್ಟವಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಚೆಂಗಪ್ಪ ಒತ್ತಾಯಿಸಿದ್ದಾರೆ.

ಸ್ಥಳೀಯ ವನ್ಯಜೀವಿ ವಲಯದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕಾಡಾನೆಗಳು ಎಷ್ಟೇ ಓಡಿಸಿದರೂ ಮತ್ತೆ ಬರುವುದರಿಂದ ಅಸಹಾಯಕತೆ ವ್ಯಕ್ತಪಡಿಸಿದರು. ಪರಿಹಾರಕ್ಕೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ರಾತ್ರಿ ಗ್ರಾಮದಲ್ಲಿ ಕಾದು ಕಾಡಾನೆಗಳನ್ನು ಓಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ಈ ಬಗ್ಗೆ ರೈತ ರವಿ ಚೆಂಗಪ್ಪ ಪ್ರತಿಕ್ರಿಯಿಸಿದ್ದು, ಮನೆಯ ಸುತ್ತಲೂ ಓಡಾಡಿರುವ ಆನೆಗಳು ಫಸಲು ನಾಶ ಮಾಡಿವೆ. ಸುಮಾರು 10 ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಸ್ಥಳೀಯ ವನ್ಯಜೀವಿ ವಲಯ ಸಿಬ್ಬಂದಿ, ಅಧಿಕಾರಿಗೆ ಕರೆ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.