ಮಡಿಕೇರಿ, ಡಿ. 2 : ರಾಜ್ಯದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರÀ ಸಿಬ್ಬಂದಿಗಳ ಗೌರವ ಧನವನ್ನು ದ್ವಿಗುಣಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ವಿಶೇಷ ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಪದಾಧಿಕಾರಿ ಎಸ್.ಸಿ. ಶಿವರಾಜ್, ರಾಜ್ಯದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸು ವಂತೆ ಮುಖ್ಯ ಮಂತ್ರಿಗಳಿಗೆ, ಸಚಿವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಸಕಾರಾತ್ಮಕ ಸ್ಪಂದನೆ ನೀಡದಿರುವುದು ಖಂಡನೀಯ ಎಂದರು. ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳಾದ ಗೀತಾ ಶ್ರೀಧರ್, ವೀಣಾ ನಾರಾಯಣ್, ಕೆ.ಯು.ಸಂಶಿದ, ಎಂ.ಬಿ.ಶಾಹಿನ, ಎಂ.ಜಿ.ನವೀನ್, ವಿಶೇಷ ಶಿಕ್ಷಕರಾದ ನೇತ್ರಾವತಿ, ರೇಖಾ, ರೋನಿಕ, ಶಿಕ್ಷಕೇತರರಾದ ಸುನೀಲ್, ಧರಣೇಶ್, ಅನಿತ, ಫಿಲೋಮಿನ, ಸರೋಜ ಹಾಗೂ ಪೋಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.