ಮಡಿಕೇರಿ, ಡಿ. 1: ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕೃತವಾಗಿ ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರಾದ ಸುರೇಶ್‍ಕುಮಾರ್ ವೀಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರು ಸಕಾಲದ ಅನುಷ್ಠಾನದ ಬಗ್ಗೆ ಪರಿಶೀಲನೆ ಮಾಡಬೇಕು. ಸಕಾಲ ಸಪ್ತಾಹ ಕಾರ್ಯಕ್ರಮದಿಂದ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳು ಕೈಜೋಡಿಸಬೇಕು. ಪ್ರತಿಯೊಂದು ಇಲಾಖೆಯಲ್ಲೂ ಸಕಾಲ ಸಪ್ತಾಹದ ಬಗ್ಗೆ ಅರಿವು ಮೂಡಿಸಲು ಬ್ಯಾನರ್ ಅಳವಡಿಸಬೇಕು ಎಂದು ತಿಳಿಸಿದರು.

ಸಕಾಲ ಸಪ್ತಾಹ ಕಾರ್ಯಕ್ರಮವು ಮೊದಲ ಹಂತದಲ್ಲಿ ತಾ. 5 ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಲ್ಲಿ ನಡೆಯಲಿದೆ. 2ನೇ ಹಂತದಲ್ಲಿ ತಾ. 7 ರಿಂದ ತಾ. 11 ರವರೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇ ಹಂತದಲ್ಲಿ ತಾ. 14 ರಿಂದ ತಾ. 19 ರವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್, ಸಕಾಲ ಮಿಷನ್ ಅಪರ ನಿರ್ದೇಶಕಿ ಡಾ. ಬಿ.ಆರ್. ಮಮತಾ, ಇತರರು ಇದ್ದರು, ವೀಡಿಯೋ ಮೂಲಕ ಉದ್ಘಾಟನೆಗೊಂಡ ಸಕಾಲ ಸಪ್ತಾಹದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶ್ರೀನಿವಾಸ ಇತರರು ಪಾಲ್ಗೊಂಡಿದ್ದರು.

ಸಪ್ತಾಹದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ವಿವರ: ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವುದು. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು.

ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ. ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು. ಸರ್ಕಾರದ ಸೇವೆಗಳನ್ನು ವಿಳಂಬವಿಲ್ಲದೆ, ಕಾಲಮಿತಿಯೊಳಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ 2012 ರಲ್ಲಿ ಜಾರಿಗೆ ತರಲಾಯಿತು. ಸಕಾಲ ಯೋಜನೆಯಡಿ ಒಟ್ಟು 98 ಇಲಾಖೆ/ ಸಂಸ್ಥೆಗಳ 1020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಿ ನಿಗಧಿತ ಅವಧಿಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.