ವೀರಾಜಪೇಟೆ, ನ. 28: ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಕಡತಗಳು ಬಾಕಿ ಉಳಿದಿದ್ದು ಸಾರ್ವಜನಿಕರಿಗೆ ಅನುಕೂಲವಾಗುವಂತೆÀ ತಕ್ಷಣ ಎಲ್ಲ ಕಡತಗಳನ್ನು ವಿಲೇವಾರಿ ಮಾಡುವಂತೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಹೇಳಿದರು.

ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ವೆ ಇಲಾಖೆಯಲ್ಲಿ ತಾಲೂಕಿನ ಐದು ಹೋಬಳಿಗಳ ಅರ್ಜಿಗಳು ಕ್ರಮ 57ರಡಿಯಲ್ಲಿ ಸಲ್ಲಿಸಿದ್ದ ಬಾಕಿ ಉಳಿದಿರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ರೈತರು ಹಾಗೂ ಸಾರ್ವಜನಿಕ ತಮ್ಮ ಕೆಲಸಗಳನ್ನು ಬಿಟ್ಟು ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂದಾಗ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ ಸರ್ವೆ ಇಲಾಖೆಯ ಮೂರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದ್ದು, ಅವರ ಜಾಗಕ್ಕೆ ಬೇರೇ ಅಧಿಕಾರಿಗಳನ್ನು ನೇಮಕ ಮಾಡದಿರುವುದರಿಂದ ಕಚೇರಿ ಮತ್ತು ಸರ್ವೆ ಕಾರ್ಯವನ್ನು ನೋಡಿಕೊಳ್ಳಬೇಕಾಗಿದೆ. ಭೂ ಮಾಪಕರ ಕೊರತೆಯಿಂದ ಕಡತಗಳು ಬಾಕಿ ಉಳಿಯಲಾಗಿದೆ. ಆದ್ಯತೆ ಮೇರೆ ವಿಲೇವಾರಿ ಮಾಡಲಾಗುತ್ತಿದೆ ಎಂದರು. ಈ ಸಂಬಂಧ ಕಂದಾಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಗಿರೀಶ್ ಗಣಪತಿ ತಿಳಿಸಿದರು.

ಸಭೆಯಲ್ಲಿ ಅಕ್ರಮ-ಸಕ್ರಮ ಸಮಿತಿಯ ಕಾರ್ಯದರ್ಶಿ ತಹಶಿಲ್ದಾರ್ ಎಲ್.ಎಂ. ನಂದೀಶ್ ಮಾತನಾಡಿ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಸೇರಿದಂತೆ ಒಟ್ಟು 2000 ಕಡತಗಳಿದ್ದು ಈಗ ಕಚೇರಿಯಲ್ಲಿರುವ ಎಲ್ಲಾ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಕಂದಾಯ ಪರಿವೀಕ್ಷಕ ಪಳಂಗಪ್ಪ ಪ್ರಕಾಶ್, ಗ್ರಾಮ ಲೆಕ್ಕಿಗರು, ತಾಲೂಕು ಕಚೇರಿಯ ಸಹಾಯಕ ಅಧಿಕಾರಿಗಳು ಹಾಜರಿದ್ದರು.