ಕೂಡಿಗೆ, ನ. 28: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಮೈಸೂರು ಓಡಿಪಿ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ರೈತರಿಗೆ ಉಚಿತವಾಗಿ ಗೊಬ್ಬರವನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸೀಮಾ ನೆರವೇರಿಸಿದರು. ನಂತರ ಮಾತನಾಡಿ, ಸಂಘ-ಸಂಸ್ಥೆಗಳು ನೀಡುವ ಯೋಜನೆ ಸವಲತ್ತುಗಳನ್ನು ರೈತರು ಉಪಯೋಗಿಸಿ ತಮ್ಮ ಜಮೀನಿನಲ್ಲಿ ಉತ್ತಮವಾದ ಬೆಳೆಯನ್ನು ಬೆಳೆಯಲು ಸಹಕಾರಿಯಾಗುತ್ತದೆ. ಇದರಲ್ಲಿ ಎಲ್ಲಾ ರೈತರು ತೊಡಗಿಸಿಕೊಂಡು ಅಧಿಕ ಇಳುವರಿಕೊಡುವ ಬೆಳೆಯನ್ನು ಬೆಳೆಯುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭ ಕೊಡಗು-ಮೈಸೂರು ವಿಭಾಗದ ಸಂಯೋಜಕ ಜಾನ್ ಬಿ. ರೋಡ್ರಿಗಸ್ ಮಾತನಾಡಿ, ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ರೈತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಾ ಬರುತ್ತಿದೆ. ರೈತರು ಹೆಚ್ಚಾಗಿ ನೋಂದಣಿ ಮಾಡಿಕೊಂಡು ಸಂಸ್ಥೆಯ ಸವಲತ್ತುಗಳನ್ನು ಪಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮವು ಹೆಬ್ಬಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಸುಂದರ್ ದಾಸ್, ಮಮತಾ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.