ಸಿದ್ದಾಪುರ, ನ.28: ಜಿಲ್ಲೆಯ ಕೊಂಡಂಗೇರಿಯಲ್ಲಿ ಸಾವನ್ನಪ್ಪಿದ ಯುವತಿಯ ಮೃತದೇಹವನ್ನು ಸಮಾಧಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.ಕೇರಳ ರಾಜ್ಯದ ಕಣ್ಣೂರು ಸಿಟಿ ನೀರ್ಚಾಲ್ ನಿವಾಸಿ ತಾಹಿರ (37) ಎಂಬಾಕೆ ಜಿಲ್ಲೆಯ ವೀರಾಜಪೇಟೆ ತಾಲೂಕಿನ ಕೊಂಡಂಗೇರಿ ಶಿಫಾ ಕೇಂದ್ರದಲ್ಲಿ ಮಾನಸಿಕ ಚಿಕಿತ್ಸೆಯಲ್ಲಿ ಇರುವಾಗ ಕಳೆದ ಬುಧವಾರ ಸಾವನ್ನಪ್ಪಿದ್ದರು ಎನ್ನಲಾಗಿದೆ. ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ ಯುವತಿಯ ಸೋದರ ಮಾವ ನೀಡಿದ ದೂರಿನ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಕೊಡಗಿನಿಂದ ಮೃತದೇಹವನ್ನು ಯುವತಿಯ ಪತಿ ಆ್ಯಂಬ್ಯುಲೆನ್ಸ್ ಮೂಲಕ ಕಣ್ಣೂರಿಗೆ ಸಾಗಿಸಲಾಗಿತ್ತು. ಆದರೆ ಯುವತಿಯ ಕುಟುಂಬಸ್ಥರಿಗೆ ಸಾವಿನ ಮಾಹಿತಿಯನ್ನು ನೀಡದೆ ಬುಧವಾರ ಅಪರಾಹ್ನ ಕಣ್ಣೂರು ಸಿಟಿ ಜುಮಾ ಮಸೀದಿಯ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ದೂರಿನ ಹಿನ್ನೆಲೆ ಕಣ್ಣೂರು ಸಿಟಿ ಪೆÇಲೀಸರ ನೇತೃತ್ವದಲ್ಲಿ ಗುರುವಾರ ಸಮಾಧಿಯಿಂದ ಮೃತದೇಹವನ್ನು ಹೊರಗೆ ತೆಗೆದು ಪರಿಶೀಲಿಸಿದರು. ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಸಂದರ್ಭ ಮೃತ ಶರೀರದ ಶ್ವಾಸಕೋಶದಲ್ಲಿ ಮತ್ತು ಮೃತ ಶರೀರದ ಅಂಗಾಂಗಗಳಲ್ಲಿ ಮರಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಯುವತಿ ಚಿಕಿತ್ಸೆ ಪಡೆಯುತ್ತಿದ್ದ ಕೊಂಡಂಗೇರಿಯ ಶಿಫಾ ಕೇಂದ್ರದ ಪಕ್ಕದಲ್ಲೇ ಕಾವೇರಿ ನದಿ ಹರಿಯುತ್ತಿದೆ. ಘಟನೆ ನಡೆದಿರುವುದು ಕರ್ನಾಟಕದಲ್ಲಾಗಿರು ವುದರಿಂದ
(ಮೊದಲ ಪುಟದಿಂದ) ಪ್ರಕರಣವನ್ನು ಕೊಡಗು ಜಿಲ್ಲೆಯ ಸಿದ್ದಾಪುರ ಪೆÇಲೀಸ್ ಠಾಣೆಗೆ ವರ್ಗಾಯಿಸುವುದರ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೂರು ಸಿಟಿ ಪೆÇಲೀಸರು ತಿಳಿಸಿದ್ದಾರೆ.
ದೌರ್ಜನ್ಯ ಆರೋಪ
ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಶಿಫಾ ಕೇಂದ್ರದಲ್ಲಿ ಅಮಾಯಕ ರೋಗಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕೊಂಡಂಗೇರಿಯ ಗ್ರಾಮಸ್ಥರು ಆರೋಪಿಸಿದ್ದಾರೆ. ಇಲ್ಲಿಗೆ ಜಿಲ್ಲೆಯ ಯಾವುದೇ ವ್ಯಕ್ತಿಗಳು ಆಗಮಿಸುತ್ತಿಲ್ಲ. ಕೇರಳ ರಾಜ್ಯದಿಂದ ಕೆಲವರು ಚಿಕಿತ್ಸೆಗೆಂದು ಬರುತ್ತಿದ್ದಾರೆ. ಈ ಹಿಂದೆ ಕೂಡಾ ಇಲ್ಲಿ ಅಸಹಜ ಸಾವುಗಳು ನಡೆದಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯುವತಿಯ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ದ ಆ್ಯಂಬ್ಯುಲೆನ್ಸ್ ಯಾವುದು? ಮೃತದೇಹವನ್ನು ಸಾಗಿಸಲು ಸಹಾಯ ಮಾಡಿದವರು ಯಾರು? ಹಾಗೂ ಅಸಹಜ ಸಾವಿನ ಬಗ್ಗೆ ತನಿಖೆ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಶಿಫಾ ಕೇಂದ್ರದ ವ್ಯಕ್ತಿಯ ತಂದೆಯ ಸಮಾಧಿಯ ಮೇಲೆ ಗೋರಿ ನಿರ್ಮಿಸಲು ಶಿಫಾ ಕೇಂದ್ರದ ವ್ಯಕ್ತಿ ಮುಂದಾದ ಸಂದರ್ಭದಲ್ಲಿ ಈ ವ್ಯಕ್ತಿಗೂ ಹಾಗೂ ಗ್ರಾಮಸ್ಥರ ನಡುವೆ ಸಂಘರ್ಷ ನಡೆದು ಪ್ರಕರಣ ಪೆÇಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅಲ್ಲದೆ ಈ ವ್ಯಕ್ತಿಯನ್ನು ಹಾಗೂ ಆತನ ಕುಟುಂಬದ ಸದಸ್ಯರನ್ನು ಕೊಂಡಂಗೇರಿ ಮುಸ್ಲಿಂ ಜಮಾಅತಿನಿಂದ ಅಮಾನತು ಮಾಡಲಾಗಿತ್ತು.
ಕಣ್ಣೂರು ಸಿಟಿ ಪೆÇಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕಣ್ಣೂರು ಸಿಟಿ ಎಸ್.ಐ ಸುಮೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಘಟನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಕರಣದ ಕುರಿತು ಕೇರಳದಿಂದ ಯಾವುದೇ ಪೆÇಲೀಸರು ಸಂಪರ್ಕಿಸಿಲ್ಲ ಎಂದು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ತಿಳಿಸಿದ್ದಾರೆ.
-ವರದಿ: ಮುಸ್ತಫ ಸಿದ್ದಾಪುರ