ಕಾಂಟಿನೆಂಟಲ್ ಸಿದ್ಧಾಂತದ ರೀತ್ಯಾ (ಖಂಡಗಳ ಸಂಪರ್ಕಗಳ ಜೋಡಣೆ) ಭಾರತ ಹಾಗೂ ಆಫ್ರಿಕೆಯ ಪ್ರದೇಶಗಳು ಒಂದಕ್ಕೊಂದು ಹತ್ತಿರದ ಜೋಡಣೆಯಾಗಿ, ಅರಬ್ಬಿ ಸಮುದ್ರ ಹುಟ್ಟುವ ಮುನ್ನ ಇದ್ದವು. ಆದಾಗಿ ಕಾವೇರಿಯ ಪಶ್ಚಿಮ ಹರಿವಿನ ಪಥವು ಆಫ್ರಿಕೆ ಬಳಿಯ ಮಡಗಾಸ್ಕರ್‍ವರೆಗೂ ಸಹಸ್ರಾರು ಮೈಲಿಯ ಹರಿವಿನ ಪಥವಾಗದೆ ಈ ಸನಿಹದ ಪಥವೇ ಆಗಿದ್ದಿರಬೇಕು. ಮಡಗಾಸ್ಕರಿನ ಈಶಾನ್ಯದಲ್ಲಿ ‘ಮಹಾಗಂಗಾ’ ಎಂಬ ಹೆಸರಿನ ನೆಲೆ ಇರುವುದು ಮಹಾಂದೋಡು ಕಾವೇರಿ ಕವಲಿನ ಪರಂಪರೆಯ ಸಂಕೇತವಾಗಿರಬಹುದು.
ಕಾವೇರಿಯ ಉಗಮ ಹಾಗೂ ಹರಿವಿನ ಪ್ರಾಚೀನತೆಯ ಈ ಹಿನ್ನೆಲೆಯಲ್ಲಿ ಉತ್ತರ ಭಾರತದ ಗಂಗೆ ನಮ್ಮ ಗಮನಕ್ಕೆ ಬರುತ್ತಾಳೆ. ದಕ್ಷಿಣ ಭಾರತದ ನದಿಗಳು ಉತ್ತರ ಭಾರತದ ನದಿಗಳಿಗಿಂತ ಪ್ರಾಚೀನ ಎಂಬುದು ಭೂ ವಿಜ್ಞಾನದ ಸಂಗತಿ. ಆದರೆ, ಶಿವನ ಜಟೆಯಿಂದ ಗಂಗೆ ಬರುವಳೆಂಬ ದಟ್ಟ ಧಾರ್ಮಿಕ ನಂಬಿಕೆಯ ಕಾರಣ ಅವಳಿಗೆ ಪ್ರಚಾರ ಹಾಗೂ ಪ್ರಸಿದ್ಧಿ ದೊರಕಿದೆ. ಸುಮಾರು ಸಾವಿರದ ಆರುನೂರು ಮೈಲಿ ಹರಿವ ಭಾರತದ ಅತ್ಯಂತ ದೀರ್ಘನದಿಯಾಗಿದ್ದಾಳೆ ಇಂದು ಗಂಗೆ. ಋಗ್ವೇದ ನದಿ ಶ್ಲೋಕಗಳಲ್ಲಿ ವಿಪುಲವಾಗಿ ಸ್ತೋತ್ರಗೊಂಡಿರುವ ಸದಾ ಹರಿವ ನದಿಯಾಗಿದ್ದ ಸರಸ್ವತಿ, ಅನೇಕ ಕವಲುಗಳುಳ್ಳ ನದಿಯಾಗಿ ಹರಿದು ಕ್ರಿ.ಪೂ. 2000 ದ ವೇಳೆಗೆ ಒಣಗಿದಳು. ಈ ಕವಲುಗಳ ಪಥವನ್ನು ಋಗ್ವೇದದಲ್ಲಿ ಒಮ್ಮೆ ಮಾತ್ರ ಉಲ್ಲೇಖಿತಳಾಗಿರುವ ಗಂಗೆ ಆಕ್ರಮಿಸಿ (ಖiveಡಿ ಅಚಿಠಿಣuಡಿe) ಹರಿಯುತ್ತ ಬಂದಿದ್ದಾಳೆ. ಈಕೆ ಕ್ರಿ.ಪೂ. ಒಂದನೆಯ ಶತಮಾನದಿಂದ ಭಾರತದ ಕಾವ್ಯ ಹಾಗೂ ಶಿಲ್ಪಗಳಲ್ಲಿ ಬಹÀಳ ಪ್ರಚಾರ, ಮಹತ್ವವನ್ನು ಪಡೆದು ಕೊಂಡವಳಾಗಿದ್ದಾಳೆ. ಆಕೆ ಹುಟ್ಟುವುದು ಹಿಮಾಲಯದ 10,300 ಅಡಿ ಎತ್ತರದ ಗಂಗೋತ್ರಿಯಲ್ಲಿ ಎಂಬ ಪ್ರಚಾರವಿದೆ. ನಂಬಿಕೆ ಹಾಗಿದೆ. ವಾಸ್ತವವಾಗಿ ಹಿಮಾಲಯ ಪರ್ವತ ಶಿಖರಗಳಲ್ಲಿ ಒಂದಾದ 21,400 ಅಡಿ ಎತ್ತರದ ಶಿವಲಿಂಗ ಶಿಖರವಿರುವ ಶಿವಲಿಂಗ ಪರ್ವತದ ತಪ್ಪಲಿನಲ್ಲಿರುವ (12,770 ಅಡಿ ಎತ್ತರ) ಗೋಮುಖ ಎಂಬ ನೆಲೆಯಲ್ಲಿ ಗಂಗೆಯ ಉಗಮವಿದೆ. ಶಿವಲಿಂಗ ಪರ್ವತದ ತಪ್ಪಲಿನ ನೀರ್ಗಲ್ಲುಗಳ ನಿವಾಸ (ಗಂಗೋತ್ರಿ ಗ್ಲೇಷಿಯರ್ಸ್)ದಿಂದ ಕರಗಿ ಕರಗಿ ಇಳಿದು ಗೋಮುಖದ ಬಳಿ ಮೊದಲು ಕಾಣಿಸಿಕೊಳ್ಳುವ ಪ್ರವಾಹಕ್ಕೆ ಭಾಗೀರಥಿ ಎಂದು ಕರೆಯಲಾಗಿದೆ. ಅಲ್ಲದೆ ಮಾನಸ ಸರೋವರ ಬೇರೆ. ಗಂಗೋತ್ರಿ ಬೇರೆ ಬೇರೆ ನೆಲೆಯಲ್ಲಿವೆ. ಕೈಲಾಸ ಪರ್ವತದ ಬುಡದಲ್ಲಿ ಮಾನಸ ಸರೋವರವಿದೆ. ದ. ಭಾರತದ ನದಿಗಳು ಉತ್ತರ ಭಾರತದ ನದಿಗಳಿಗಿಂತ ಪ್ರಾಚೀನ ಭೂವೈಜ್ಞಾನಿಕ ಹಿನ್ನೆಲೆಯಲ್ಲಿ ಕಾವೇರಿ ಗಂಗೆಗಿಂತ ಹೆಚ್ಚು ಪ್ರಾಚೀನತೆ ಪಡೆದವಳು ಎನ್ನಬೇಕು. ಹಿಮಾಲಯ ಹುಟ್ಟುವ ಮುನ್ನವೂ ಕಾವೇರಿ ಇದ್ದಳಲ್ಲ. ಜೊತೆಗೆ ಸ್ಕಾಂದ ಪುರಾಣದ ಕತೆಯೂ ಪೌರಾಣಿಕ ಸಾಕ್ಷಿಯನ್ನು ಇದಕ್ಕೆ ಒದಗಿಸುವಂತಿದೆ.
ತ್ರಿಗುಣಿ ಎಂಬ ಬ್ರಾಹ್ಮಣನಿಗೆ ಕಾವೇರಿಯ ಬಗ್ಗೆ ಗಂಗೆಯು ಹೇಳುತ್ತಾಳೆ. ಕಾವೇರಿ ಪವಿತ್ರಳು, ದಿವ್ಯಳು. ಅವಳ ದರ್ಶನದಿಂದ ಪಾಪ ಪರಿಹಾರ, ಅವಳಲ್ಲಿ ಮಿಂದು ಬಾ ಎಂದು.
ಯಮುನೆಯು ಗಂಗೆಯ ಬಳಿ ಬಂದು ಆಕೆಯ ಒದ್ದೆಯಾದ ವಸ್ತ್ರ ಮತ್ತು ಕೂದಲನ್ನು ನೋಡಿ, ಏಕೆ ನೆನೆದಿದೆ ? ಎಂದು ಕೇಳಿದಳಂತೆ. ಆಗ ಗಂಗೆ ನುಡಿದಳಂತೆ :
ಸರಿದ್ಭಿರಹ ಮಾರ್ಮಾಯಾ : ಕಾವೇರ್ಯಾ- ಸ್ತೀರ್ಥ ಮಾದರಾತ್
ದೃಷ್ಟ್ವಾ ಪುಣ್ಯಾಂಭಸಿ ಸ್ನಾತ್ವಾ ಪುನರತ್ವಾಗತಾವಯಮ್ !
ಶ್ರೇಷ್ಠವಾದ ಕಾವೇರಿ ತೀರ್ಥ ವನ್ನು ನದಿಗಳೊಡನೆ ದರ್ಶನಮಾಡಿ ಪವಿತ್ರವಾದ ಆ ಕಾವೇರಿಯಲ್ಲಿ ಮಿಂದು ಪುನಃ ಇಲ್ಲಿಗೆ ಎಲ್ಲರೂ ಬಂದೆವು. ಅದು ಕಾರಣ ವಸ್ತ್ರ ಮತ್ತು ಕೂದಲು ಒದ್ದೆ ಆಗಿವೆ. ಗಂಗೆಯಿಂದ ಹಿರಿಯಳೆಂದು ಹೀಗೆ ಮಾನಿತಳಾದ ಕಾವೇರಿಯ ಪೌರಾಣಿಕ ಸಂಬಂಧ ಸಿಬಿ ದೇಶವನ್ನು ಈ ಮೊದಲೇ ಹೇಳಿರುವಂತೆ ಗಂಗೆ ಹರಿಯುವ ಪ್ರದೇಶವಾಗಿ ಗುರುತಿಸಿರುವುದು ಸಿಬಿ ಜನತೆಯನ್ನು ಕಾವೇರಿ ದಂಡೆಯ ಮೇಲೆ ಚೋಳರೊಡನೆ ಗುರುತಿಸಿ ದರೂ, ಮತ್ಸ್ಯರೆಂದು ಕರೆದಿರುವುದು. ಇವೆಲ್ಲಾ ‘ಕಾವೇರಿ ಗಂಗಾ’ ಎಂಬ ಸಾಂಸ್ಕøತಿಕ ಮಿಲನಕ್ಕೆ ಸಾಕ್ಷಿಯಾಗಿವೆ. ಪ್ರಕೃತಿಯ ವರವಾಗಿ ಕಾವೇರಿ ವರುಣ ವರ್ಷದಿಂದ ತುಂಬಿ-ತುಂಬಿ ಹರಿಯುವವರೆವಿಗೂ ಕರ್ನಾಟಕ ತಮಿಳು ನಾಡುಗಳಲ್ಲಿ ನೀರಿನ ಪಾಲುದಾರಿಕೆಯ ಸಮಸ್ಯೆ ಅಷ್ಟಾಗಿ ಕಾಣದಿದ್ದರೂ ಪರಸ್ಪರ ಅರಿವಿನ ಬಾಳ್ವೆಯ ಇತಿಹಾಸದ ಬೆಳಸನ್ನು ಬೆಳೆಯಬೇಕಾದವರು ಈ ದ್ವಯನಾಡಿವರಷ್ಟೆ ಅಲ್ಲ, ಸಂಬಂಧಿಸಿದವರೆಲ್ಲರ ಮನಸ್ಸು ಕಾರ್ಯೋನ್ಮುಖ ವಾಗಬೇಕು. ಕಾವೇರಿ-ಗಂಗೆಯರ ಭೌತಿಕ ಮಿಲನವೂ ಈ ದಿಸೆಯಲ್ಲಿ ಒಂದು ಸಾಂಸ್ಕøತಿಕ ಪರಿಹಾರವಾಗಿ ಎಲ್ಲಾ ಪಕ್ಷಗಳಿಗೂ ಒದಗಿದರೆ, ಅದು ಐತಿಹಾಸಿಕವಾಗುತ್ತದೆ.
ಭೌಗೋಳಿಕ ಪರಿಸರ : ಕರ್ನಾಟಕದ ನೈರುತ್ಯ ಮೂಲೆಗಿರುವ ಕೊಡಗಿಗೆ ತಮಿಳು ಸಂಗಂ ಸಾಹಿತ್ಯದಲ್ಲಿ ‘ಕುಡಕಂ’ ಎಂಬ ಹೆಸರಿದೆ. ‘ಕುಡು’ ಶಬ್ದದಿಂದ ಬಂದದ್ದು ಕುಡುಮಲೆನಾಡು ಎಂದೂ ಹೇಳುವುದುಂಟು. ಐತಿಹ್ಯದಂತೆ ಉಗುರುಗಳಿಂದ ಬೆಟ್ಟಗಳನ್ನು ಬಯಲು ಮಾಡಿಕೊಂಡ ಕಾರಣ ಕ್ರೋಢದೇಶ, ಪೌರಾಣಿಕವಾಗಿ ಬ್ರಹ್ಮದೇಶ, ಮತ್ಸ್ಯದೇಶ ಎಂದೂ ಕರೆಯಲಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಿನ ಈ ನೆಲ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಈ ಹಿನ್ನೆಲೆಯಲ್ಲಿ ಮೇಂದಲೆನಾಡು, ಕಿಗ್ಗಟ್ಟುನಾಡು ಅಂದರೆ ಮೇಲಿನ ತಲೆನಾಡು, ಕೆಳಗಣ ನಾಡು ಎಂದು ಕಾವೇರಿಯನ್ನು ದೃಷ್ಟಿಯಲ್ಲಿಟ್ಟುಕೊಂಡ ಜನಪದ ವಿಭಾಗಗಳು ಇದರಲ್ಲಿವೆ.
ಹೆಸರಿನ ದೃಷ್ಟಿಯಿಂದ ಕುಡ (ಪಶ್ಚಿಮ)-ಕೊಡಗು ಎಂಬ ವಿಕಾಸ ಕ್ರಮದಿಂದಾಗಿ ಪಶ್ಚಿಮಕ್ಕೆ ಇರುವುದು ಕೊಡಗು ಎನ್ನುವ ಅರ್ಥವಾಗುತ್ತದೆ; ಇದು ಯಾವುದರ ಪಶ್ಚಿಮಕ್ಕೆ ಎಂಬುದು ಸ್ಪಷ್ಟವಿಲ್ಲ ಎನ್ನುವ ಅಭಿಪ್ರಾಯವಿದೆ. ಆದರೆ ತಮಿಳು ಶಿಲಪ್ಪಾದಿಕಾರಂ ಕೃತಿ ಸೂಚಿಸಿರುವ ‘ಕುಡುಮಲೈ ಕುಡಕಂ’ ಕೊಡಗಿಗೆ ಅನ್ವಯವಾದ ಪದವಾಗಿದೆ. ತಮಿಳಿನ ರೀತ್ಯ ‘ಕೊಡಗು’ ಎಂಬ ಶಬ್ಧದ ನಿಷ್ಪತ್ತಿಯು ಹೀಗಿದೆ. ಕುಡ (ಮ್) : ಪಶ್ಚಿಮ+ಆಕಂ: ಒಳಗೆ> ಕುಡಕಂ>ಕೊಡಕು>ಕೊಡಗಂ>ಕೊಡಗ>ಕೊಡಗಿ ಅಂದರೆ ಪಶ್ಚಿಮದೊಳಗೆ ಅಥವಾ ಒಳಪಶ್ಚಿಮದಲ್ಲಿ ಎಂಬ ಅರ್ಥ ಒದಗುತ್ತದೆ. ಅದಾಗಿ ಒಳ ಪಶ್ಚಿಮ ಘಟ್ಟಗಳ ಒಳಗಿನಲ್ಲಿ ಕೊಡಗು ಇದೆ ಎಂಬ ನೆಲೆ ನಿರ್ದೇಶನದಲ್ಲಿ ಆಗಿದೆ.
ಶಬ್ದಮಣಿದರ್ಪಣವು ‘ಕುಡÀಕೊಂಕದಕ್ಕುಂ’ ಎಂದಿದೆ. ಕ.ಕ. ನಿಘಂಟು ‘ಕುಡು’ ಎಂದರೆ ಬಾಗಿರು ವಿಕೆ ವಕ್ರಪಥ ಎಂದಿದೆ. ‘ನದಿ’ಯು ಬಾಗಿ ಬಳಸುವುದು, ಕೊಂಕಾಗಿ ಸಾಗುವುದು ಇವೆಲ್ಲ ‘ಕವಲಾಗಿ’ ಹೋಗುವ ನದಿಯ ಸಂದರ್ಭವನ್ನು ಹೇಳುತ್ತವೆ. ಕಾವೇರಿಗಿದ್ದ ಮೂರು ಕವಲುಗಳಲ್ಲಿ ಪ್ರಾಗಿತಿಹಾಸಕಾಲದಲ್ಲಿ ಪಶ್ಚಿಮಕ್ಕೆ ಪ್ರಮುಖವಾಗಿ ಎರಡು ಕವಲುಗಳನ್ನು ಹೊಂದಿತ್ತು. ಅದು ಕಾರಣ ಕುಡಹೊಳೆ, ಕುಡುಕಂ ಹೊಳೆ, ಪಶ್ಚಿಮದಲ್ಲೂ ಕವಲುಗಳ ಹೊಳೆ ಎಂದು ರೂಢಿಯಲ್ಲಿದ್ದುದ್ದು ಅಗಸ್ತ್ಯನ ಕತೆಯ ಮೂಲಕ ಹಾಗೂ ಉಷ್ಣಸ್ವಭಾವದ ನದಿಯಾಗಿ ಕವೇರ ಪುತ್ರಿ ‘ಕಾವೇರಿ’ ಎನಿಸಿದರೂ ‘ಕುಡಹೊಳೆ’ ಹರಿದ ನೆಲೆಯಾಗಿ ಕೊಡಗು ಎಂಬ ನಿಸರ್ಗವಾಚಿ ನೆಲೆ ಹೆಸರನ್ನು (ಸ್ಥಳನಾಮ) ಪಡೆದಿರುವ ಬಗ್ಗೆಯೂ ಪರಿಶೀಲಿಸಬೇಕು.
1593 ಚ. ಮೈಲಿ ಅಂದರೆ 4182 ಚ.ಕಿ.ಮೀ ಪ್ರದೇಶವನ್ನು ಅಪ್ಪಿರುವ ಕೊಡಗು ಉತ್ತರದಕ್ಷಿಣವಾಗಿ ಹೇಮಾವತಿಯಿಂದ ದೇವಾಸಿ (ದೇವರ್ಷಿ) ಬೆಟ್ಟದವರೆಗೆ ಗರಿಷ್ಠ ಅರವತ್ತು ಮೈಲಿ ಉದ್ದದಷ್ಟು ಇದೆ. ಪೂರ್ವದಿಂದ ಪಶ್ಚಿಮದವರೆಗೆ ಅಂದರೆ ಕುಶಾಲನಗರ (ಫ್ರೇಸರ್‍ಪೇಟೆ)ದಿಂದ ಸಂಪಾಜೆ ಯವರೆಗೆ ಗರಿಷ್ಠ ಅಗಲ ನಲವತ್ತು ಮೈಲಿಯಷ್ಟು ಹೊಂದಿದೆ. ಉತ್ತರದಲ್ಲಿ ಮೈಸೂರಿನಿಂದ (ಈಗ ಹಾಸನ ಜಿಲ್ಲೆ) ಸ್ವಲ್ಪ ಭಾಗ ಕುಮಾರಧಾರ ಮತ್ತು ಹೇಮಾವತಿ ನದಿಗಳ ಗಡಿಯನ್ನು ಹೊಂದಿದೆ. ಪೂರ್ವದಲ್ಲಿ ಮೈಸೂರಿನ ಪ್ರಸ್ಥಭೂಮಿಯನ್ನು ತಬ್ಬಿ ಸ್ವಲ್ಪ ದೂರದವರೆಗೆ ಕಾವೇರಿಯ ನೈಸರ್ಗಿಕ ಮೇರೆಯನ್ನು ಹೊಂದಿದೆ. ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಲೆಯಾಳದ ಭಾಗವಿದೆ. ಅರಣ್ಯ ಹಾಗೂ ಕಣಿವೆಗಳು ಆ ಭಾಗಗಳನ್ನು ಪ್ರತ್ಯೇಕಿಸಿವೆ. ಕೊಡಗಿನ ಪಶ್ಚಿಮಗಡಿಯ ಬಹಳಷ್ಟು ಅಗಲದ ವಿಸ್ತಾರವು ಕಿರುತೋಳಿನ ಆಕಾರದಲ್ಲಿ ಮೈಸೂರಿನೊಳಗಿನಲ್ಲಿ (ಈಗ ಹಾಸನ ಜಿಲ್ಲೆ) ತನ್ನ ಈಶಾನ್ಯಕ್ಕೆ ಚಾಚಿಕೊಂಡಿದೆ. ಭೌಗೋಳಿಕವಾಗಿ ಉತ್ತರ ಅಕ್ಷಾಂಶ 11056 ರಿಂದ 12052 ಹಾಗೂ ಪೂರ್ವ ರೇಖಾಂಶ 75022 ರಿಂದ 76012ಗಳ ನಡುವೆ ಕೊಡಗು ಇದೆ. ಆಂಗ್ಲರ ಆಳ್ವಿಕೆಗೆ ಮುನ್ನ ದೊಡ್ಡ ವೀರಪ್ಪನ ಕಾಲದಲ್ಲಿ ಕನ್ನಡ ಜಿಲ್ಲೆಯ ಅಮರಸುಳ್ಯ ಮತ್ತು ಪುತ್ತೂರು ತಾಲೂಕು ಸೇರಿದಂತೆ ಕೊಡಗು ಇತ್ತು. ಹೈದರ್ ಕಾಲದಲ್ಲಿಯೂ ಪಂಜೆ ಮತ್ತು ಬೆಳ್ಳಾರೆಗಳು ಕೊಡಗಿಗೆ ಸೇರಿದ್ದುದರ ಸೂಚನೆ ಇದೆ.
ತೆರೆಕಣಾಂಬಿಯನ್ನು ಕುಡಗುನಾಡು ಎಂದು ಕರೆದಿರುವುದು ಬಹುಶ: ಒಂದು ಕಾಲಕ್ಕೆ ಅದು ಕೊಡಗಿನ ಭಾಗವಾಗಿದ್ದು ಕೊಡಗಿನ ವಿಸ್ತಾರವು ಅಲ್ಲಿಯವರೆಗೆ ಹಬ್ಬಿದ್ದುದರ ಸೂಚನೆ ಆಗಿರುವಂತಿದೆ. ಕೊಡಗಿನ ಪ್ರಾಚೀನ ಭೂಪಟಗಳ ರೀತ್ಯಾ ದಕ್ಷಿಣದಲ್ಲಿ ಕೊಡಗಿನ ಗಡಿ ಪೂನಾಡೂ ಹಾಗೂ ಕೇರಳದ ಕಲ್ಪಾತಿವರೆಗೆ, ಉತ್ತರದಲ್ಲಿ ಸಕಲೇಶಪುರದವರೆಗೆ ಇತ್ತು. ಪಿರಿಯಾಪಟ್ಟಣ, ರಾಮನಾಥಪುರ, ಗೊರೂರು ಕೂಡ ಕೊಡಗಿಗೆ ಸೇರಿತ್ತು. ಮಡಿಕೇರಿ, ಕ್ರಿ.ಶ. 466ರ 1ನೆಯ ಶಾಸನ, ಹಾನಗಲ್ಲು ಕದಂಬ ದುದ್ದರಸನ ಕ್ರಿ.ಶ. 2095ರ ಯಡೂರು ಶಾಸನ ಕ್ರಿ.ಶ. 1245 ಅರಕಲಗೂಡು ಶಾಸನ ಇದನ್ನೆಲ್ಲ ಸಮರ್ಥಿಸುವಂತಿವೆ. ಕೆಂಬಟ್ಟಿಗಳು ನಾಟಿ ಹಾಕುವ ಸಮಯದಲ್ಲಿ ಹಾಡುವ ತುಳು ಹಾಗೂ ಅರಬಿ ಹಾಡುಗಳಲ್ಲಿ ಪುತ್ತೂರು, ಸಂಪಾಜೆಯನ್ನು ಸ್ಮರಿಸುವುದು, ಅವುಗಳ ಪರಿಸರದಲ್ಲಿರುವ ಬೆಳ್ಳಾರೆಯಲ್ಲಿ ದೊಡ್ಡ ವೀರಪ್ಪ ಒಡೆಯನು ಹಾಕಿಸಿರುವ ಶಾಸನವಿರುವುದು ಇದಕ್ಕೆಲ್ಲ ಪೂರಕ ಅಂಶವಾಗಿದೆ. ಇಂತೆಲ್ಲ ವಿಸ್ತಾರವಿದ್ದ ಕೊಡಗು ಇಂದು 4102 ಚ.ಕಿ.ಮೀ ವಿಸ್ತೀರ್ಣಕ್ಕೆ ಕುಗ್ಗಿದೆ.
ಭೂಪಟದಲ್ಲಿ ಇಂದು ಕೊಡಗಿನ ಆಕಾರವನ್ನು ಮಗುವಿನ ಕಾಲು ಚೀಲದಾಕಾರಕ್ಕೆ ಹೋಲಿಸಲಾಗಿದೆ. ಹಿಮ್ಮಡಿ ಭಾಗ ವಾಯುವ್ಯಕ್ಕೆ, ಉಂಗುಷ್ಠ ಆಗ್ನೇಯಕ್ಕೆ ಇದೆ. ಎತ್ತರದ ಕೋಡುಗಳ ಗಿರಿಗಳ ನಾಡೆನಿಸಿ ಅದು ಮೂಡಣದಿಳಿಜಾರು, ಪಡುವಣ ಘಟ್ಟಗಳಿಂದ ಕೂಡಿದೆ. ಸಮುದ್ರ ಮಟ್ಟದಿಂದ ಸರಾಸರಿ 5335 ಅಡಿ ಎತ್ತರದ ಗಿರಿ ಶ್ರೇಣಿಯಲ್ಲಿ 1744.68 ಮೀ ಎತ್ತರದ ತಡಿಯಂಡಮೋಳು ಕೊಡಗಿನ ಅತ್ಯುನ್ನತ ಶಿಖರವಾಗಿದೆ. ಹುಲ್ಲು, ಕಾಡು ಬಾಣೆಗಳು ಈ ಗಿರಿಶ್ರೇಣಿಗಳ ಭಾಗಗಳಲ್ಲಿ ಇದ್ದು ಕಾಫಿಯು ಇಂದು ಯಥೇಚ್ಛವಾಗಿ ಬೆಳೆಯುತ್ತಿದೆ. ರೈಸ್ ಅವರು ಗಮನಿಸಿರುವಂತೆ ಉತ್ತರ ಕೊಡಗಿನ ಸೋಮವಾರಪೇಟೆಯ ನೆರೆಯ ಬೆಟ್ಟಗಳು ಹೆಚ್ಚು ದುಂಡಗಿನವಾಗಿವೆ. ಆ ಮಲೆಗಳ ಇಳಿಜಾರು ಸುಂದರ ಕಾನನ ವೃಕ್ಷಗಳ ಬೀಡಾಗಿದೆ. ಒತ್ತಿಕೊಂಡ ಬೆಟ್ಟಗಳು, ತಕ್ಷಣ ಬೇರೆಯಾಗುವ ಬೆಟ್ಟಗಳ ಭಾಗಗಳು ಹರಿವ ತೊರೆ, ಧುಮ್ಮಿಕ್ಕುವ ತಲೆತೊರೆ, ಅಗಲದ ರಭಸದ ಹೊಳೆಗಳೂ ಅಲ್ಲಿವೆ. ಕುಶಾಲನಗರದತ್ತ ಮೈಸೂರು ಪೀಠಭೂಮಿಯ ಚಹರೆಗಳು ಕಾಣುತ್ತವೆ. ಅಲ್ಲಲ್ಲಿ ಹರಡಿದ ಬೆಟ್ಟಗಳಿವೆ. ಮಡಿಕೇರಿಯ ದಕ್ಷಿಣಕ್ಕೆ ವೀರರಾಜೇಂದ್ರ ಪೇಟೆಯತ್ತ ಅದರಲ್ಲಿಯೂ ಬೆಪ್ಪನಾಡು ಹಾಗೂ ಕಡಿಯತ್‍ನಾಡು ಪ್ರದೇಶದಲ್ಲಿ ವಿಶಾಲವಾದ ಪೂರ್ವದ ಗಡಿಯಲ್ಲಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳ ನಡುವೆ ವಿಶಾಲವಾದ ಅರಣ್ಯಗಳಿವೆ. ಅವುಗಳು ಇಂದು ಕಾದಿಟ್ಟ ಅರಣ್ಯಗಳಾಗಿ ದುಬಾರೆಕಾಡು, ಮಾಲ್ದಾರೆ ಕಾಡುಗಳೆನಿಸಿವೆ. (ಮುಂದುವರಿಯುವುದು)
- ಡಾ|| ಎಂ. ಜಿ. ನಾಗರಾಜ್