*ಗೋಣಿಕೊಪ್ಪಲು, ನ. 28: ಡಿಸೆಂಬರ್ 2 ರಂದು ಗೋಣಿಕೊಪ್ಪಲಿನಲ್ಲಿ ಪ್ರಥಮ ಬಾರಿಗೆ ಭಿಕ್ಷಾಟನೆ ನಿರ್ಮೂಲನಾ ಅಭಿಯಾನವನ್ನು ಆರಂಭಿಸಲಾಗುವದು ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಕೊಡಗು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕ್ಕಲ್ ಕುಸುಮಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಮಾಮಹೇಶ್ವರಿ ದೇವಸ್ಥಾನದಿಂದ ಡಿಸೆಂಬರ್ 2 ರಂದು ಬೆಳಿಗ್ಗೆ 10.30 ಗಂಟೆಗೆ ಭಿಕ್ಷಾಟನೆ ನಿರ್ಮೂಲನಾ ಜಾಥಾಗೆ ಚಾಲನೆ ನೀಡಲಾಗುವದು. ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ನಿರ್ಮೂಲನೆ ಅಗತ್ಯ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರೀತಿ ಚಿಕ್ಕಮಾದಯ್ಯ ಹಾಗೂ ವಿವಿಧ ಇಲಾಖಾಧಿಕಾರಿಗಳು ಮಾತನಾಡಲಿದ್ದಾರೆ ಎಂದರು. ಮೆರವಣಿಗೆ ಸಂದರ್ಭ ನಗರದ ವರ್ತಕರು ಹಾಗೂ ಸಾರ್ವಜನಿಕರಿಗೆ ಭಿಕ್ಷುಕರಿಗೆ ಹಣ, ಆಹಾರ, ಯಾವದೇ ವಸ್ತು ನೀಡದಂತೆ ಕರಪತ್ರ ನೀಡುವ ಮೂಲಕ ಅರಿವು ಮೂಡಿಸಲಾಗುವದು. ಗೋಣಿಕೊಪ್ಪಲು ಎಪಿಎಂಸಿ ಮುಂಭಾಗ ಜಾಥಾ ಅಂತ್ಯಗೊಳ್ಳಲಿದ್ದು, ಅಂದು ಕೆಲವು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಲಾಗುವದು ಎಂದು ಕುಸುಮ ಹೇಳಿದರು. ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಜವರೇಗೌಡ, ಪ್ರಧಾನ ಕಾರ್ಯದರ್ಶಿ ದೇವರಾಜ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಶಶಿಕುಮಾರ್, ತಾಲೂಕು ಅಧ್ಯಕ್ಷ ಪ್ರದೀಪ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.