ನಾಪೋಕ್ಲು, ನ. 28: ನಿವಾರ್ ಚಂಡಮಾರುತದ ಪರಿಣಾಮ ಹೋಬಳಿ ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ವಿವಿಧೆಡೆ ಮಳೆ ಸುರಿದಿದೆ. ಸಮೀಪದ ಕೋಕೆರಿ ಕೊಳಕೇರಿ,ಕುಂಜಿಲ ಕಕ್ಕಬ್ಬೆ ವ್ಯಾಪ್ತಿಯಲ್ಲಿ ಮಳೆಯಾಗಿದ್ದು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಹಲವೆಡೆ ಭತ್ತ ಕೊಯ್ಲಿಗೆ ಬಂದಿದ್ದು ಮಳೆಯಿಂದಾಗಿ ಸಮಸ್ಯೆ ಉಂಟಾಗಿದೆ. ಕೊಕೇರಿ ಗ್ರಾಮದ ಬೆಳೆಗಾರ ಸುಧೀರ್ ಅಯ್ಯಪ್ಪ ಅವರ ಭತ್ತದ ಗದ್ದೆಯಲ್ಲಿ ಕೊಯ್ಲು ಮಾಡಲಾಗಿದ್ದು ಮಳೆಯಿಂದ ಬೆಳೆ ಹಾನಿಗೊಳಗಾಗಿದೆ. ಅಲ್ಲಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು ಕಾಫಿ ಹಣ್ಣನ್ನು ಒಣಗಿಸಲು ಬೆಳೆಗಾರರು ಪರಿತಪಿಸುವಂತಾಗಿದೆ. ಈಗ ಸುರಿಯುವ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ.
-ದುಗ್ಗಳ.