ವೀರಾಜಪೇಟೆ, ನ. 28 : ಮೂರು ದಿನಗಳ ಹಿಂದೆ ತರ್ಮೆಕಾಡು ಪೈಸಾರಿಯ ಏಳು ಕುಟುಂಬಗಳ ನಿವಾಸಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕಾಂಗ್ರೆಸ್ ಕಾರ್ಯಕರ್ತರುಗಳ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿನ ನಿವಾಸಿಗಳಿಗೆ ಸಾಂತ್ವನ ಹೇಳಿದರಲ್ಲದೆ, ತಾಲೂಕು ತಹಶೀಲ್ದಾರ್ ನಂದೀಶ್‍ಗೆ ಬರಲು ಸೂಚನೆ ನೀಡಿದರೂ ಸ್ಥಳಕ್ಕೆ ಬಾರದ ಕಾರಣ ಅವರ ಗೈರು ಹಾಜರಾತಿಯಲ್ಲಿ ಸ್ಥಳಕ್ಕೆ ಬಂದಿದ್ದ ಕಂದಾಯ ಪರಿವೀಕ್ಷಕ ಪಳಂಗಪ್ಪ ಪ್ರಕಾಶ್ ಸಿಬ್ಬಂದಿಗಳಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಮುಂದಿನ 7ದಿನಗಳೊಳಗೆ ಈ ಪೈಸಾರಿ ಜಾಗದಲ್ಲಿ ಗುಡಿಸಲು ಮನೆ ಕಟ್ಟಿಕೊಂಡಿರುವ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಖಡಕ್ ಗಡುವು ನೀಡಿದರು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರೊಂದಿಗೆ ಎಲ್ಲರ ಸಹಕಾರದೊಂದಿಗೆ ಕಚೇರಿಯ ಮುಂದೆ ಧರಣಿ ಮುಷ್ಕರ, ಪ್ರತಿಭಟನೆ ಹಮ್ಮಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದರು.
ತರ್ಮೆಕಾಡು ಪೈಸಾರಿ ಜಾಗದಲ್ಲಿರುವ ನಿವಾಸಿಗಳಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಸರಿಯಲ್ಲ. ಪೈಸಾರಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯ ಮನೆ ಕಟ್ಟಿಕೊಂಡಿದ್ದ ಪೂಜಾ ಎಂಬ ಅನಾಥೆ ಯುವತಿ ಸೇರಿದಂತೆ ಏಳು ಕುಟುಂಬಗಳ ಮೇಲೆ ದೌರ್ಜನ್ಯವೆಸಗಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸಬಾರದು. ಗೋಮಾಳ ಪೈಸಾರಿ ಎಲ್ಲಿದೆ ಎಂಬುದನ್ನು ಅಧಿಕಾರಿಗಳು ಆಧಾರ ಸಮೇತ ಕಂಡು ಹಿಡಿಯಬೇಕು. ಈಗ ತರ್ಮೆಕಾಡು ಪೈಸಾರಿಯಲ್ಲಿರುವ ಕುಟುಂಬಗಳನ್ನು ನೆಮ್ಮದಿಯಿಂದ ಇರಲು ಬಿಡಿ. ಅಮಾಯಕ ಕುಟುಂಬಗಳು ವಾಸಿಸುವುದು ಖಚಿತವಾಗಿ ಗೋಮಾಳ ಪೈಸಾರಿ ಯಾದರೆ ಸಾಕ್ಷ್ಯಧಾರ ನೀಡಿದರೆ ಮಾತ್ರ ಅವರುಗಳಿಗೆ ಬೇರೆ ಬದಲಿ ಸ್ಥಳಗಳಲ್ಲಿ ಸರಕಾರದ ಯೋಜನೆಯ ಸೂರು ನೀಡಿ ನಂತರ ಅವರನ್ನು ಸಮಾಧಾನವಾಗಿ ಸ್ಥಳಾಂತರಿಸಬೇಕು ಎಂದು ವೀಣಾ ಅಚ್ಚಯ್ಯ ಕಂದಾಯ ಅಧಿಕಾರಿಗೆ ಆದೇಶಿಸಿದರು.
ತಾ. 24 ರಂದು ತಾಲೂಕು ಆಡಳಿತ ವಿವಾದಿತ ಗೋಮಾಳದ ಹೆಸರಿನಲ್ಲಿ ತರ್ಮೆಕಾಡು ಪೈಸಾರಿಗೆ ಬೇಲಿ ಹಾಕಿದ ಎಲ್ಲ ಅಧಿಕಾರಿಗಳು ಸ್ಥಳದಿಂದ
(ಮೊದಲ ಪುಟದಿಂದ) ಹಿಂತಿರುಗಿದ ನಂತರ ಸಂಜೆ ಸಂಘಟನೆಯ ಹೆಸರಿನಲ್ಲಿ ಕೆಲವರು ಪೈಸಾರಿಯ ಅಮಾಯಕ ನಿವಾಸಿಗಳ ಮನೆ ಮೇಲೆ ದೌರ್ಜನ್ಯ ನಡೆಸಿ ಗುಡಿಸಲುಗಳನ್ನು ಖಾಲಿ ಮಾಡಿ ತೆರಳುವಂತೆ ಬಲಾತ್ಕರಿಸಿ ಗುಡಿಸಿಲಿನ ರಕ್ಷಣೆಗಾಗಿ ಹೊದಿಸಿದ್ದ ಪ್ಲಾಸ್ಟಿಕ್‍ನ್ನು ಹರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರುಗಳ ವಿರುದ್ಧ ಪೊಲೀಸರು ಕ್ರಮಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಹೇಳಿದ ವೀಣಾ ಅಚ್ಚಯ್ಯ ಅವರು ತರ್ಮೆಕಾಡು ಪೈಸಾರಿಯಲ್ಲಿರುವ ಒಟ್ಟು 51 ಕುಟುಂಬಗಳಿಗೂ ತಾಲೂಕು ಆಡಳಿತ ರಕ್ಷಣೆ ನೀಡಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಜಾನ್‍ಸನ್, ವಿ.ಕೆ.ಸತೀಶ್, ಸಿ.ಎಸ್.ಕಾವೇರಪ್ಪ, ಮಹಮ್ಮದ್ ರಾಫಿ, ಅಲ್ಪ ಸಂಖ್ಯಾತರ ಘಟಕದ ಕೆ.ರಫೀಕ್, ಎನ್.ನರೇಂದ್ರನಾಥ್ ಕಾಮತ್ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.