ವೀರಾಜಪೇಟೆ, ನ. 27: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಪೆರುಂಬಾಡಿಯ ಕಸ ವಿಲೇವಾರಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ಮೂರು ಟನ್ ಪ್ಲಾಸ್ಟಿಕ್ ಒಣ ತ್ಯಾಜ್ಯವನ್ನು ಏಜೆನ್ಸಿ ಮೂಲಕ ತುಮಕೂರಿನ ಇಂಡಸ್ಟ್ರೀಯಲ್ ಎಸ್ಟೇಟ್‍ನಲ್ಲಿರುವ ಸಿಮೆಂಟ್ ಉತ್ಪನ್ನ ಘಟಕಕ್ಕೆ ಪ್ರಥಮವಾಗಿ ಇಂದು ಲಾರಿ ಮೂಲಕ ರವಾನಿಸಲಾಯಿತು.
ವೀರಾಜಪೇಟೆ ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಟ್ರಾಕ್ಟರ್‍ನಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಕ್ಯಾರಿಚೀಲಗಳು, ಹಾಲಿನ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಪ್ಲಾಸ್ಟಿಕ್‍ಗೆ ಸಂಬಂಧಿಸಿದ ಇತರ ಎಲ್ಲ ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ಹಸಿ ಕಸದಿಂದ ಬೇರ್ಪಡಿಸಿದ ಪ್ಲಾಸ್ಟಿಕ್‍ನ ಒಣ ತ್ಯಾಜ್ಯವನ್ನು ಮಾತ್ರ ತುಮಕೂರಿಗೆ ಬೇಡಿಕೆಯ ಮೇರೆಗೆ ಕಳುಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.
ಕಸ ವಿಲೇವಾರಿ ಘಟಕದಲ್ಲಿ ಸಂಸ್ಕರಿಸಿದ ತ್ಯಾಜ್ಯಗಳನ್ನು ರಾಜ್ಯದಲ್ಲಿ ಬಳಸುವ ಕಾರ್ಖಾನೆಗಳಿಗೆ ಬೇಡಿಕೆಯ ಮೇರೆಗೆ ಕಳುಹಿಸಲಾಗುವುದು. ಇದರಿಂದ ಇಲ್ಲಿನ ಕಸವಿಲೇವಾರಿ ಘಟಕದಲ್ಲಿಯೂ ಶುಚಿತ್ವ, ಕಸದ ಹೊರೆಯನ್ನು ಕಾಪಾಡಲು ಸಾಧ್ಯವಾಗಲಿದೆ, ಆಯ್ದ ಒಣ ತ್ಯಾಜ್ಯವನ್ನು ಫ್ಯಾಕ್ಟರಿಗೆ ಕಳಿಸಿದರೂ ಪಟ್ಟಣ ಪಂಚಾಯಿತಿಗೆ ಬರುವ ಪ್ರತಿಫಲದ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಮುಂದಿನ ದಿನಗಳಲ್ಲಿ ಇದರ ಸಂಬಂಧ ವಿಚಾರ ವಿನಿಮಯ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶ್ರೀಧರ್ ತಿಳಿಸಿದರು.
ಕಾರ್ಖಾನೆಗಳು ಇಲ್ಲಿ ಸಂಸ್ಕರಿಸಿದ ತ್ಯಾಜ್ಯದ ಗುಣಮಟ್ಟವನ್ನು ಆಧರಿಸಿ ಉತ್ಪನ್ನಕ್ಕೆ ಬಳಸುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಫ್ಯಾಕ್ಟರಿಯಲ್ಲಿ ಕೊನೆಯ ಹಂತದಲ್ಲಿ ಸೌದೆಗೆ ಬದಲಾಗಿ ಶಾಖೋತ್ಪನ್ನಕ್ಕೂ ಬಳಸಲು ಸಾಧ್ಯವಾಗಲಿದೆ ಎಂದು ತ್ಯಾಜ್ಯ ಸಂಗ್ರಹದ ಏಜೆನ್ಸಿ ಪಡೆದಿರುವ ರಿಜ್ವಾನ್ ಪಾಷ ತಿಳಿದ್ದಾರೆ.