*ಕೊಡ್ಲಿಪೇಟೆ,ನ.26: ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವ ವಿದ್ಯಾಗಮವನ್ನು ಪುನರಾರಂಭಿಸಿ ಆದಷ್ಟು ಬೇಗ ಸರಕಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಸರಕಾರ ಕ್ರಮ ವಹಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.

1 ರಿಂದ 8 ನೇ ತರಗತಿಯವರೆಗೆ ಈ ವರ್ಷ ಶಾಲೆಗಳನ್ನು ಆರಂಭಿಸದಿರುವ ಸರಕಾರದ ನಿರ್ಧಾರ ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಹಾಗೂ ಬಡ ಮಕ್ಕಳ ವಿರೋಧಿಯಾಗಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಸೌಲಭ್ಯಗಳು ಇಲ್ಲದ ಕಾರಣ ಸರ್ಕಾರ ಹಾಗೂ ಶಿಕ್ಷಣ ತಜ್ಞರ ಶಿಫಾರಸ್ಸಿನ ಮೇರೆಗೆ ಜಾರಿಗೆ ಬಂದ ವಿದ್ಯಾಗಮವನ್ನು ಇದೀಗ ಸ್ಥಗಿತಗೊಳಿಸಿರುವದು ಸರಿಯಲ್ಲ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎ. ನಾಗೇಶ್ ಅಭಿಪ್ರಾಯಿಸಿದ್ದಾರೆ.

ವಿದ್ಯಾಗಮದ ಯೋಜನೆಯಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿತ್ತು. ಇದನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದ್ದು, ಇದರ ಹಿಂದೆ ಖಾಸಗಿ ಶಾಲೆಗಳ ಹಿತಾಸಕ್ತಿ ಅಡಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ನಾಗೇಶ್ ಹೇಳಿದ್ದಾರೆ.

ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಮೀರಿ ಹೆಚ್ಚಿನ ಶುಲ್ಕ ಪಡೆದು ಆನ್‍ಲೈನ್ ತರಗತಿ ನಡೆಸುತ್ತಿವೆ. ಕೆಲವು ಶಾಲೆಗಳು ತರಗತಿಯನ್ನೂ ನಡೆಸುತ್ತಿದೆ. ಆದರೆ ಸರ್ಕಾರಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾತ್ರ ಇನ್ನೂ ಸ್ಪಷ್ಟ ನಿರ್ದಾರ ಕೈಗೊಂಡಿಲ್ಲ ಎಂದು ವೇದಿಕೆಯ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಅಪೆÇ್ರೀಜ್ ಅವರುಗಳು ಪ್ರಕಟಣೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಸೂಕ್ತ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಸಮನ್ವಯ ವೇದಿಕೆಯ ನೇತೃತ್ವದಲ್ಲಿ ಪೆÇೀಷಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.