ಕುಶಾಲನಗರ, ನ 26: ಕುಶಾಲನಗರ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡುತ್ತಿರುವವರ ಮೇಲೆ ಪೊಲೀಸರು ದಂಡ ವಿಧಿಸುವ ಅಭಿಯಾನ ಪ್ರಾರಂಭಿಸಿದ್ದಾರೆ. ಹೆದ್ದಾರಿ ಗಸ್ತು ವಾಹನದಲ್ಲಿ ಅಧಿಕಾರಿಗಳು ಕಳೆದ ಒಂದು ವಾರದಿಂದ ಇಲ್ಲಿನ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಕಾರ್ಯಾಚರಣೆ ನಡೆಸುತ್ತಿದ್ದು 100 ಕ್ಕೂ ಅಧಿಕ ಸವಾರರಿಗೆ ದಂಡ ವಿಧಿಸಿ ಕ್ರಮಕೈಗೊಂಡಿದ್ದಾರೆ.
ಈ ಸಂದರ್ಭ ಮೈಸೂರು ಕಡೆಯಿಂದ ಮತ್ತು ಕುಶಾಲನಗರ ಕಡೆಯಿಂದ ತೆರಳುವ ದ್ವಿಚಕ್ರ ವಾಹನ ಸವಾರರು ದಂಡ ತಪ್ಪಿಸಲು ಹಲವು ಗಂಟೆಗಳ ಕಾಲ ಕಾದು ನಿಲ್ಲುತ್ತಿದ್ದ ದೃಶ್ಯ ದಿನನಿತ್ಯ ಗೋಚರಿಸುತ್ತಿದೆ. ಆದರೂ ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮದಿಂದ ಶೇ.60 ರಷ್ಟು ಸವಾರರು ಇದೀಗ ಹೆಲ್ಮೆಟ್ ಧರಿಸುವ ಮೂಲಕ ಚಾಲನೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.