ಮಡಿಕೇರಿ, ನ. 26: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯು ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿರಿಸಿ ನಡೆಸುತ್ತಿರುವ ಹೋರಾಟವು ಯಶಸ್ವಿ ಕಾಣುವದು ಖಚಿತವಾಗಿ ಈಗಾಗಲೇ ಹೋರಾಟ ಫಲಪ್ರದದತ್ತ ಸಾಗುತ್ತಿರು ವದಾಗಿ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಹೇಳಿದರು. ಸಂಘಟನೆಯ ವತಿಯಿಂದ ಇಂದು ನಗರದ ಹೊರವಲಯ ದಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ಆಯೋಜಿಸಲಾಗಿದ್ದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊಡವ ಜನಾಂಗದ ಬೇಡಿಕೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವರಾದ ಅಡಗೂರು ವಿಶ್ವನಾಥ್ ಅವರುಗಳೂ ಸಹಮತ ವ್ಯಕ್ತಪಡಿಸಿ ಸಂಘಟನೆಯ ಹೋರಾಟಕ್ಕೆ ಉತ್ತೇಜನ ನೀಡಿದರು.
ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ನಾಚಪ್ಪ ಅವರು ಕೊಡವರಿಗೆ ಸಿಗಬೇಕಾದ ಹಕ್ಕನ್ನು ವಿರೋಧಿಸುತ್ತಿರುವವರು ರಾಷ್ಟ್ರದ್ರೋಹಿಗಳಿಗೆ ಸಮಾನ ಎಂದು ಟೀಕಿಸಿದರು. ಬುಡಕಟ್ಟು ಸ್ಥಾನಮಾನದ ಬೇಡಿಕೆ ನೈಜವಾದ ಹಕ್ಕಾಗಿದೆ ಇದಕ್ಕಾಗಿ ನಾವು ಭಿಕ್ಷೆ ಬೇಡಬೇಕಾಗಿಲ್ಲ. ಸಂವಿಧಾನಾತ್ಮಕವಾಗಿಯೇ ಈ ಅವಕಾಶವಿದ್ದು, ಇದಕ್ಕೆ ಭದ್ರತೆ ಸಿಗಬೇಕಷ್ಟೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಹೊರತು ಬೇರೆಯವರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ ಎಂದ ಅವರು,
(ಮೊದಲ ಪುಟದಿಂದ) ಕೊಡವ ಸಮುದಾಯದ ಉಳಿವಿಗಾಗಿ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಹಾಗೂ 342 ವಿಧಿಯನ್ವಯ ರಾಜ್ಯಾಂಗ ಖಾತ್ರಿಗೆ ಒಳಪಡಿಸುವ ಮೂಲಕ ಕೊಡವರ ಅಸ್ತಿತ್ವಕ್ಕೆ ಶಾಸನಬದ್ಧ ಸ್ಥಿರೀಕರಣ ನೀಡಲು ಸಂವಿಧಾನ ತಿದ್ದುಪಡಿಯಾಗಬೇಕು ಎಂದು ಒತ್ತಾಯಿಸಿದರು. ಕೊಡವರು ಮೂಲತಃ ಬೇಟೆಗಾರರು. ನಮ್ಮ ಪೂರ್ವಜರು ನಾಯಿಗಳ ಸಹಾಯದಿಂದ ಬೇಟೆಯಾಡಿ ಜೀವನ ಸಾಗಿಸುತ್ತಿದ್ದರಲ್ಲದೆ ಬುಡಕಟ್ಟು ಜನಾಂಗ ಎಂಬದಕ್ಕೆ ಹಲವಷ್ಟು ಪುರಾವೆಗಳಿವೆ. ಆದ್ದರಿಂದ ಕೊಡವರಿಗೆ ಬುಡಕಟ್ಟು ಸ್ಥಾನಮಾನ ದೊರೆಯಲಿ ಎಂಬ ಆಶಯದಿಂದ ಕಳೆದ 30 ವರ್ಷಗಳಿಂದ ಸಿ.ಎನ್.ಸಿ ಹೋರಾಟ ನಡೆಸುತ್ತಿದೆ. 100 ದಿನ, 100 ತಿಂಗಳು ಅಥವಾ ವರ್ಷಗಳೇ ಆಗಲಿ ಬುಡಕಟ್ಟು ಸ್ಥಾನಮಾನ ದೊರೆಯುವ ತನಕ ಈ ಹೋರಾಟ ನಡೆಯಲಿದೆ ಎಂದರು.
ನಮ್ಮ ಋಣ ತೀರಿಸಬೇಕಿದೆ
ಕೊಡವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಯುದ್ಧಗಳಲ್ಲಿಯೂ ನಮ್ಮ ಸಮುದಾಯದವರು ಹೋರಾಡಿ ತ್ಯಾಗ ಮಾಡಿದ್ದಾರೆ. ಕೊಡವರ ಅಸ್ತಿತ್ವಕ್ಕೆ ಶಾಸನಬದ್ಧ ಸ್ಥಿರೀಕರಣ ನೀಡಿ ಸಂವಿಧಾನ ತಿದ್ದುಪಡಿಯಾದಲ್ಲಿ ನಮ್ಮ ಋಣ ತೀರಿಸಿದಂತಾಗುತ್ತದೆ.
ಇದೀಗ ಸಿ.ಎನ್.ಸಿಯ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ದೊರೆಯುತ್ತಿದೆ. ಕಾಂಗ್ರೆಸ್ ಪಕ್ಷವಾಗಲಿ, ಬಿ.ಜೆ.ಪಿ ಪಕ್ಷವಾಗಲಿ ಸಿ.ಎನ್.ಸಿ ಗೆ ಬೆಂಬಲ ನೀಡುತ್ತಿದೆ. ಇದೊಂದು ಪಕ್ಷಾತೀತವಾದ ಹೋರಾಟವಾಗಿದೆ. ರಾಜಕೀಯವಾಗಿ ಕಾಂಗ್ರೆಸ್ ಪಕ್ಷ ಬಿ.ಜೆ.ಪಿಯನ್ನು ದೂರುವುದು, ಬಿ.ಜೆ.ಪಿ ಯವರು ಕಾಂಗ್ರೆಸ್ ಅವರನ್ನು ದೂರುವುದು ಸಾಮಾನ್ಯವಾಗಿದೆ. ಆದರೆ ಇವೆರಡೂ ಪಕ್ಷದವರು ಪಕ್ಷಾತೀತವಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಹಲವರ ವಿರೋಧ
ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಸರಕಾರಕ್ಕೆ ಮನವಿ ಮಾಡಿದ್ದು ಈ ಬಗ್ಗೆ ಬುಡಕಟ್ಟು ಜನಾಂಗಗಳ ಅಧ್ಯಯನ ವಿಭಾಗ ಅಧ್ಯಯನ ನಡೆಸುತ್ತಿದೆ. ಆದರೆ ಇದಕ್ಕೆ ಹಲವು ಪ್ರಮುಖ ಸಮುದಾಯದವರು ಸೇರಿದಂತೆ ಕೊಡವ ಸಮುದಾಯದ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇದು ಸಮಂಜಸವಲ್ಲ. ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಅಧ್ಯಯನಕ್ಕೂ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೆ. ಇದರಿಂದ ಬೇರೆಯವರಿಗೆ, ಇತರ ಬುಡಕಟ್ಟು ಕುಲದವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.
ಗೆಲುವು ಸಿಗಲಿದೆ
ಇತ್ತೀಚಿನ ದಿನಗಳಲ್ಲಿ ಕೊಡವರಿಗೆ ಬುಡಕಟ್ಟು ಸ್ಥಾನಮಾನ ದೊರೆಯುವ ವಿಚಾರ ತಾರ್ಕಿಕ ಅಂತ್ಯಕ್ಕೆ ಬರುತ್ತಿರುವಂತೆ ಕೆಲವರಿಂದ ವಿರೋಧವು ಹೆಚ್ಚಾಗುತ್ತಿದೆ. ಇದು ನಮಗೆ ಗೆಲುವು ದೊರೆಯುವ ಒಂದು ಸಜ್ಞೆ ಆಗಿದೆ. ಸಿ.ಎನ್.ಸಿ ಹೋರಾಟ ಪ್ರಾರಂಭಿಸಿದಾಗ ಹಲವಷ್ಟು ಮಂದಿ ನಮ್ಮನ್ನು ನಿರ್ಲಕ್ಷಿಸಿದರು. ಆದರೆ ಇದೀಗ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ನಾವು ಪ್ರಗತಿ ಸಾಧಿಸಿ ಯಶಸ್ಸಿನತ್ತ ಸಾಗುತ್ತಿರುವುದು ಎಂದರು.
ಅಸ್ಸಾಮ್ ರಾಜ್ಯದಲ್ಲಿ ಬುಡಕಟ್ಟು ಸ್ಥಾನಮಾನ
ಅಸ್ಸಾಮ್ ರಾಜ್ಯದ 6 ಬುಡಕಟ್ಟು ಕುಲದವರು ಸತತ 40 ವರ್ಷಗಳ ಹೋರಾಟ ನಡೆಸಿತು. ಈ ಮಧ್ಯೆ ಬೇಕಾದಷ್ಟು ವಿರೋಧವನ್ನು ಆ ಕುಲದವರು ಎದುರಿಸಿ ಹೋರಾಟವನ್ನು ಕೈ ಬಿಡದ ಕಾರಣ ಕೊನೆಗೂ ಆ 6 ಸಮುದಾಯದವರಿಗೆ ಬುಡಕಟ್ಟು ಸ್ಥಾನಮಾನ ದೊರೆಯಿತು. ನಮ್ಮ 30 ವರ್ಷದ ಹೋರಾಟಕ್ಕೂ ಕೊಡವ ಸಮುದಾಯದವರು ಬೆಂಬಲ ನೀಡಿದ್ದಾರೆ. ಮತ್ತಷ್ಟು ಬೆಂಬಲ ನೀಡುವುದರಿಂದ ನಮಗೂ ಕೂಡ ಯಶಸ್ಸು ದೊರೆಯಲಿದೆ ಎಂಬ ಭರವಸೆಯ ನುಡಿಗಳನ್ನಾಡಿದರು.
ನಾಯಕತ್ವದ ಮಹತ್ವ
ದಲಾಯಿ ಲಾಮಾ ನವರ ಪ್ರಯತ್ನದಿಂದ ಟಿಬೇಟಿಯನರಿಗೆ ಚೀನಿಯರಿಂದ ರಕ್ಷಣೆ ದೊರಕಿತು. ನೆಲ್ಸನ್ ಮಂಡೇಲಾ ಅವರಿಂದ ಕರಿ ಜನಾಂಗದವರಿಗೆ ನ್ಯಾಯ ದೊರಕಿತು. ತಮ್ಮ ನಾಯಕತ್ವದಲ್ಲಿ ಬಿ.ಕೆ ಹರಿಪ್ರಸಾದ್, ಹೆಚ್ ವಿಶ್ವನಾಥ್ ಅವರುಗಳು ಸೇರಿದಂತೆ ಇತರರ ಪ್ರಯತ್ನದಿಂದ ಕೊಡವರ ರಕ್ಷಣೆಯಾಗಲಿ ಎಂದು ಆಶಿಸಿದರು.
ಸಂವಿಧಾನಾತ್ಮಕವಾದ ಎಚ್ಚರಿಕೆ ಅಗತ್ಯ
ದೇಶದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿದೆ ಈ ನಿಟ್ಟಿನಲ್ಲಿ ನಮ್ಮತನಕ್ಕೆ ಧಕ್ಕೆ ಎದುರಾಗುತ್ತಿರುವ ಸಂದರ್ಭದಲ್ಲಿ ಸಂವಿಧಾನಾತ್ಮಕವಾಗಿ ಎಚ್ಚರಿಕೆ ವಹಿಸಬೇಕಿದೆ. ಎಲ್ಲ ಹಕ್ಕು - ಬಾಧ್ಯತೆಗಳಿಗೆ ಸಂವಿಧಾನದ ರಕ್ಷಣೆ ಅಗತ್ಯ ಎಂದರು. ಆದರೆ ಇದರ ಬಗ್ಗೆ ಗೊಂದಲ ಸೃಷ್ಟಿಸಿ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಂಘಟನೆಯ ಬೆಂಬಲಿಗರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಾಚಪ್ಪ ಸೇರಿದಂತೆ ಅತಿಥಿಗಳು ಬಾಳೆ ಕಡಿಯುವ ಮೂಲಕ, ಆಗಸಕ್ಕೆ ಗುಂಡು ಹಾರಿಸಿ, ಅಗಲಿದ ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಮಾವೇಶಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜನಾಂಗದ ಜನಪದ ಕಲೆಗಳನ್ನೂ ಪ್ರದರ್ಶಿಸಲಾಯಿತು.
ಬೆಂಬಲದ ನುಡಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಂಎಲ್ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿ ಈ ಬಗ್ಗೆ ಪರಿಷತ್ನಲ್ಲಿ ಪ್ರಸ್ತಾಪಿಸುವದಾಗಿ ಹೇಳಿದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಅವರು ಇನ್ನೂ ಕೂಡ ಜನಾಂಗದ ತಾಳ್ಮೆ ಪರೀಕ್ಷೆ ಮಾಡದಂತೆ ಹೇಳಿ ಎಲ್ಲರೂ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಾಂತಿ ಸತೀಶ್, ಕಲಿಯಂಡ ಪ್ರಕಾಶ್, ಮೀನಾ ಪ್ರಕಾಶ್, ನಂದಿನೆರವಂಡ ಅಪ್ಪಯ್ಯ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ನಂದಿನೆರವಂಡ ನಿಶಾ ಅಚ್ಚಯ್ಯ ಪ್ರಾರ್ಥಿಸಿ, ಚೆಕ್ಕೇರ ತ್ಯಾಗರಾಜ್, ಅಜ್ಜಮಾಡ ಚಿಮ್ಮ, ಸಾವಿತ್ರಿ ತಂಡದಿಂದ ನಂಗಕೊಡವಂಗ ಹಾಡು ಮೂಡಿಬಂತು. ಕಲಿಯಂಡ ಪ್ರಕಾಶ್ ಸ್ವಾಗತಿಸಿ, ಬಾಚರಣಿಯಂಡ ಚಿಪ್ಪಣ್ಣ ನಿರೂಪಿಸಿದರು. ಅಜ್ಜಿಕುಟ್ಟೀರ ಲೋಕೇಶ್ ವಂದಿಸಿದರು. ವೇದಿಕೆಯಲ್ಲಿ ಚೇಂದಡ ಜಮ್ಸಿ ಪೊನ್ನಪ್ಪ, ಪೂರಿಮಂಡ ದಿನಮಣಿ, ಕಲಿಯಂಡ ನೀನಾ ಪ್ರಕಾಶ್, ಅಪ್ಪಚ್ಚಿರ ರೀನಾ ನಾಣಯ್ಯ, ಬೊಟ್ಟಂಗಡ ಸವಿತ, ಅರೆಯಡ ಸವಿತ, ಪುಲ್ಲೆರ ಸ್ವಾತಿ ಕಾಳಪ್ಪ, ಪುಳ್ಳಂಗಡ ನಟೇಶ್, ಮನೆಯಪಂಡ ಕಾಂತಿ ಸತೀಶ್ ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರತಿಜ್ಞಾ ವಿಧಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.