(ವಿಶೇಷ ವರದಿ: ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ನ. 27: ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಪ್ರಶಸ್ತಿಯನ್ನು ಪಡೆದ ಆಸ್ಪತ್ರೆಯಾಗಿತ್ತು, ಪ್ರಾಥಮಿಕ ಆರೋಗ್ಯ ಕೇಂದ್ರ ಚೆಟ್ಟಳ್ಳಿ.
ದೂರದ ಊರುಗಳಿಂದ ಇಲ್ಲಿಗೆ ಚಿಕಿತ್ಸೆಗೆಂದು ನೂರಾರು ಜನರು ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಬರುತ್ತಿದ್ದರು. ಅತ್ಯುತ್ತಮ ಚಿಕಿತ್ಸೆ ಕೂಡ ದೊರೆಯುತ್ತಿತ್ತು. ಹೆರಿಗೆ ವಿಭಾಗದಲ್ಲಿ ಚಿಕಿತ್ಸೆ ನೀಡುವಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿತ್ತು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ. ಮೂರು ವರ್ಷಗಳ ಹಿಂದೆ ವರ್ಗಾವಣೆಯಾದ, ಹಲವಾರು ವರ್ಷಗಳಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉತ್ತಮ ವೈದ್ಯಾಧಿಕಾರಿಯಾಗಿದ್ದ ಗಿರೀಶ್ ವರ್ಗಾವಣೆಯ ನಂತರ ಸರ್ಕಾರ ಚೆಟ್ಟಳ್ಳಿ ಆಸ್ಪತ್ರೆಗೆ ಆಯುಷ್ ವೈದ್ಯರನ್ನು ನೇಮಕ ಮಾಡಿದೆ. ಗಿರೀಶ್ ಅವರು ಈಗ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕಳೆದ 12 ವರ್ಷಗಳಿಂದ ಅತ್ಯುತ್ತಮ ವಾಗಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ನುರಿತ ದಾದಿಯರು, ವರ್ಗಾವಣೆಯಾಗಿರುವುದು ಚೆಟ್ಟಳ್ಳಿ ಜನತೆಗೆ ದೊಡ್ಡ ಹೊಡೆತ ಬಿದ್ದಿದೆ ಎನ್ನಬಹುದು. ಯಾಕೆಂದರೆ, ಇಬ್ಬರು ದಾದಿಯರು ಇದ್ದರೆ, ಚೆಟ್ಟಳ್ಳಿ ಆಸ್ಪತ್ರೆಗೆ ಬರುವ ಎಲ್ಲಾ ಹೆರಿಗೆ ಸಂಬಂಧಿಸಿದ ಪ್ರಕರಣಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ವರ್ಗಾವಣೆ ಯಾಗಿರುವ ಇಬ್ಬರು ನರ್ಸ್ಗಳು ಇದ್ದರೆ ಆಸ್ಪತ್ರೆಯಲ್ಲಿ ವೈದ್ಯರ ಅವಶ್ಯಕತೆ ಇರಲಿಲ್ಲ. ಈ ಇಬ್ಬರು ದಾದಿಯರು, ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸಿದ್ದಾಪುರ, ಇಂಜಿಲಗೆರೆ, ಗುಹ್ಯ, ನೆಲ್ಲಿಹುದಿಕೇರಿ, ನಲ್ವತ್ತೇಕರೆ, ಅಭ್ಯತ್ ಮಂಗಲ, ವಾಲ್ನೂರು-ತ್ಯಾಗತ್ತೂರು, ನಂಜರಾಯಪಟ್ಟಣ, ಭೂತನಕಾಡು ಹಾಗೂ ಚೆಟ್ಟಳ್ಳಿ ಸುತ್ತಮುತ್ತಲಿನ ಎಲ್ಲಾ ಗರ್ಭಿಣಿಯರು ಚೆಟ್ಟಳ್ಳಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಸುಲಭ ಹೆರಿಗೆ ಯಾಗುತ್ತಿತ್ತು. ವರ್ಗಾವಣೆಯಾದ ಇಬ್ಬರು ದಾದಿಯರು, ಯಾವುದೇ ತುರ್ತು ಹೆರಿಗೆ ಪ್ರಕರಣಗಳಾದರೂ, ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸದೆ, ‘ನಾವು ನೋಡುತ್ತೇವೆ’ ಎಂದು ಹಲವಾರು ಮಂದಿ ತಾಯಿ-ಮಗುವಿನ ಜೀವ ಉಳಿಸಿದ್ದಾರೆ. ಆಸ್ಪತ್ರೆಗೆ ಮಧ್ಯರಾತ್ರಿ, ಚಿಕಿತ್ಸೆಗೆ ಕೆಲವೊಮ್ಮೆ ರೋಗಿಗಳು ಬಂದರೆ, ತಕ್ಷಣ ಇಬ್ಬರು ದಾದಿಯರು ಸ್ಪಂದಿಸುತ್ತಿದ್ದರು. ಇದೀಗ ಇಬ್ಬರು ನುರಿತ ದಾದಿಯರು ವರ್ಗಾವಣೆ ಯಾಗಿರುವುದು, ಚೆಟ್ಟಳ್ಳಿ ಸುತ್ತಮುತ್ತಲಿನ ಜನತೆಗೆ ದೊಡ್ಡ ಆಘಾತವಾಗಿದೆ.
ಚಿಕಿತ್ಸೆ ನಿರ್ಲಕ್ಷ್ಯ
ಹೆರಿಗೆ ಪ್ರಕರಣಗಳಿಗೆ ಅತ್ಯುತ್ತಮ ವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ಎಂದೇ ಹೆಸರುವಾಸಿ ಪಡೆದಿದ್ದ ಚೆಟ್ಟಳ್ಳಿ ಆಸ್ಪತ್ರೆ ಇದೀಗ, ಹೆರಿಗೆ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ನುರಿತ ಇಬ್ಬರು ದಾದಿಯರು ವರ್ಗಾವಣೆಯಾದ, ದಿನಗಳಿಂದ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಗರ್ಭಿಣಿಯರಿಗೆ ಹೆರಿಗೆ ದಿನ ಹತ್ತಿರ ಬರುವ, ಮೂರು-ನಾಲ್ಕು ದಿನಗಳ ಮೊದಲೇ ‘ನೀವು ಬೇರೆ ಆಸ್ಪತ್ರೆಗೆ ಹೋಗಿ’ ಎಂದು ಆಶಾಕಾರ್ಯಕರ್ತೆಯರ ಬಳಿ ಚೆಟ್ಟಳ್ಳಿ ಸುತ್ತಮುತ್ತಲಿನ ಗರ್ಭಿಣಿಯರಿಗೆ ಮಾಹಿತಿ ನೀಡಲು ಆಸ್ಪತ್ರೆಯಿಂದ ಹೇಳಿದ್ದಾರೆ. ತುರ್ತು ಚಿಕಿತ್ಸೆ ಎಂದು ಬಂದರೆ ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಚೆಟ್ಟಳ್ಳಿ ಸುತ್ತಲಿನ ಜನತೆ ಚಿಕಿತ್ಸೆಗಾಗಿ ಏಕೈಕ ಆಸ್ಪತ್ರೆಯನ್ನೇ ಅವಲಂಬಿಸಿದ್ದರು. ರಾತ್ರಿ ಸಮಯದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ದೂರದ ಮಡಿಕೇರಿ ಆಸ್ಪತ್ರೆಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಹದಗೆಟ್ಟ ರಸ್ತೆಯ ಮಧ್ಯೆ ಮಡಿಕೇರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಹರಸಾಹಸವಾಗಿದೆ. ಚೆಟ್ಟಳ್ಳಿ ಸುತ್ತಮುತ್ತಲಿನ ಭಾಗಗಳಲ್ಲಿ ದಿನಕೂಲಿ ಕೆಲಸಕ್ಕೆ ತೆರಳಿ, ತಮ್ಮ ಜೀವನವನ್ನು ಸಾಗಿಸುವವರು ಬಹುತೇಕರಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ, ಸಾಲ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿಯಾಗಿದೆ ಚೆಟ್ಟಳ್ಳಿ ಸುತ್ತಮುತ್ತಲಿನ ಜನತೆಯದ್ದು. ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ಹೆರಿಗೆಯಾದರೆ ಲಕ್ಷಗಟ್ಟಲೆ ಹಣ ಪಾವತಿಸಬೇಕು. ನಾವು ತೋಟದ ಮನೆಯಲ್ಲಿ ವಾಸಿಸುತ್ತಿದ್ದೇವೆ. ದಿನ ಕೂಲಿಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿಲ್ಲ. ಸಾಲ ಮಾಡಿ ಬೇರೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು, ತೋಟ ಕಾರ್ಮಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಒಂದು ವರ್ಷದಲ್ಲೇ ವರ್ಗಾವಣೆ
ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ, ಡಾ ಗಿರೀಶ್ ಅವರ ವರ್ಗಾವಣೆಯ ನಂತರ, ಆಸ್ಪತ್ರೆಗೆ ಸರ್ಕಾರ ಆಯುಷ್ ವೈದ್ಯರಾದ ಯಶೋಧ ಅವರನ್ನು ನೇಮಿಸಿದ್ದರು.
ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಒತ್ತಾಯ ಮೇರೆಗೆ ಸರ್ಕಾರ ಎಂ.ಬಿ.ಬಿ.ಎಸ್. ವೈದ್ಯರಾದ ಅಹ್ಮದ್ ಶಹಬ್ರನ್ನು ನೇಮಕ ಮಾಡಿದ್ದರು. ಆದರೆ ಅವರು ಉತ್ತಮ ಚಿಕಿತ್ಸೆ ನೀಡುತ್ತಿದ್ದರೂ ಸಹಾ, ಆಸ್ಪತ್ರೆಯಲ್ಲಿ ಕಾಣಸಿಗುವುದು ವಿರಳವಾಗಿತ್ತು. ಒಂದು ವರ್ಷದೊಳಗೆ ವೈದ್ಯರಾದ ಅಹ್ಮದ್ ಶಹಬ್ ವರ್ಗಾವಣೆ ಪಡೆದುಕೊಂಡು ಬೇರೆಡೆಗೆ ತೆರಳಿದರು.
ಮೊಬೈಲ್ ನೋಡುತ್ತಿರುತ್ತಾರೆ!
ಕಳೆದ ಎರಡು ವರ್ಷಗಳಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರೊಬ್ಬರು ಜನರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪಗಳು ಕಳೆದ ಹಲವು ತಿಂಗಳುಗಳಿಂದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದರೆ, ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಅಲ್ಲದೇ ಯಾರಾದರೂ ರೋಗಿಗಳು ಚಿಕಿತ್ಸೆಗೆ ಎಂದು ವೈದ್ಯರ ಬಳಿ ತೆರಳಿದರೆ ರೋಗಿಗಳನ್ನು ನೋಡದೆ ಮೊಬೈಲ್ ನೋಡುತ್ತಾ ಇರುತ್ತಾರೆ ಎಂದು ಸಾರ್ವಜನಿಕರು ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಗೆಂದು ರೋಗಿಗಳು ಬಂದರೆ, ಕೋಣೆಯಲ್ಲಿ ಇದ್ದರೂ ಸಹ ಬರುವುದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಒಬ್ಬರೇ ನರ್ಸ್
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯರಾಗಿ ಕಾರ್ಯನಿರ್ವವಹಿಸುತ್ತಿದ್ದ, ಪಾರ್ವತಿ ಹಾಗೂ ನಾಗವೇಣಿ ಇಬ್ಬರು ಕೂಡ ವರ್ಗಾವಣೆಯಾಗಿದ್ದಾರೆ. ಒಬ್ಬರು ವೀರಾಜಪೇಟೆಗೆ ವರ್ಗಾವಣೆಯಾಗಿದ್ದು, ಮತ್ತೊಬ್ಬರು ಮೈಸೂರು ಜಿಲ್ಲೆಯ ಕೆ.ಆರ್. ಪೇಟೆಗೆ ವರ್ಗಾವಣೆ ಯಾಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಒಬ್ಬರು ನರ್ಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬೆಳಿಗ್ಗೆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರಾತ್ರಿ ಸಮಯದಲ್ಲಿ ಕಿರಿಯ ಮಹಿಳಾ ಸಹಾಯಕಿಯರು ಆಸ್ಪತ್ರೆಯಲ್ಲಿ ಇರುತ್ತಾರೆ. ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಹೋದರು ಸಹಾ, ಏನೂ ಅರಿಯದ ಕಿರಿಯ ಮಹಿಳಾ ಸಹಾಯಕಿಯರು ಏನು ಮಾಡುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಭಾನುವಾರ ಹಾಗೂ ರಜಾ ದಿನಗಳಲ್ಲಿ ಆಸ್ಪತ್ರೆಯಲ್ಲಿ ಯಾರೊಬ್ಬರು ಕೂಡ ಆಸ್ಪತ್ರೆಯಲ್ಲಿ ಇರುವುದಿಲ್ಲ. ಸರ್ಕಾರ ಆದಷ್ಟು ಬೇಗ ನುರಿತ ನರ್ಸ್ಗಳನ್ನು ನೇಮಕ ಮಾಡಬೇಕಾಗಿದೆ. ಕೊಡಗು ಜಿಲ್ಲೆಯಲ್ಲೇ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸಿದ್ದಾಪುರ ಹಾಗೂ ವಿವಿಧ ಭಾಗಗಳ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿದ್ದ ಆಸ್ಪತ್ರೆಯಲ್ಲಿ ಇದೀಗ ಹೆರಿಗೆ ಪ್ರಕರಣಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ಚೆಟ್ಟಳ್ಳಿ ಭಾಗದ ಜನತೆ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆದಷ್ಟೂ ಬೇಗ ಎಂಬಿಬಿಎಸ್ ವೈದ್ಯರನ್ನು ಹಾಗೂ ನುರಿತ ನರ್ಸ್ಗಳನ್ನು ನೇಮಕ ಮಾಡಿ, ಜನರ ಆರೋಗ್ಯವನ್ನು ಕಾಪಾಡಬೇಕಾಗಿದೆ.