ಮುಳ್ಳೂರು, ನÀ. 26: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಶನಿವಾರಸಂತೆ ಹೋಬಳಿ (ಕೃಷ್ಣಪ್ಪ ಸ್ಥಾಪಿತ) ಶಾಖೆ ವತಿಯಿಂದ ಹಕ್ಕೋತ್ತಾಯ ಮೂಲಕ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರಸಂತೆ ನಾಡ ಕಚೇರಿ ಎದುರು ಹೋಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬಾಕಿ ಇರುವ ಪ್ರಗತಿಯನ್ನು ಮುಂದುವರೆಸುವುದು, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾಯಿದೆ ಅಡಿಯಲ್ಲಿ ರಾಜ್ಯಮಟ್ಟದಲ್ಲಿ 22 ಸಾವಿರ ಕೋಟಿ ಅನುದಾನವನ್ನು ಎಸ್.ಸಿ ಹಾಗೂ ಎಸ್.ಟಿ ಸಮುದಾಯದವರಿಗೆ ವೆಚ್ಚ ಮಾಡುವುದು, ಅಂಬೇಡ್ಕರ್ ನಿಗಮ, ವಾಲ್ಮಿಕೀ ನಿಗಮ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆ ಮತ್ತು ವಸತಿ ಕಾಲೇಜುಗಳಿಗೆ ವರ್ಗಾಯಿಸಿ ಈ ವರ್ಷದ ಅವಧಿಯ ವೇಳೆಗೆ ಈ ಅನುದಾನವನ್ನು ಸದ್ಬಳಕೆ ಮಾಡಲು ಆಗ್ರಹ, ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರಕಾರದ ವತಿಯಿಂದ ಅಂಬೇಡ್ಕರ್ ಪ್ರತಿಮೆ ಮತ್ತು ಅಂಬೇಡ್ಕರ್ ಭವನ ಸ್ಥಾಪಿಸುವುದು ಹಾಗೂ ಪ್ರತಿಯೊಂದು ತಾಲೂಕು, ಹೋಬಳಿ ಮತ್ತು ಕಂದಾಯ ಗ್ರಾಮಗಳಲ್ಲೂ ಅಂಬೇಡ್ಕರ್ ಪ್ರತಿಮೆ ಮತ್ತು ಭವನವನ್ನು ಸ್ಥಾಪಿಸಲು ಆಗ್ರಹ, ಬಡ ಪರಿಶಿಷ್ಟರಿಗೆ ನಿವೇಶನ ಇಲ್ಲದವರಿಗೆ ನಿವೇಶನ ಮಂಜೂರು ಮಾಡುವುದು, ದಲಿತರಿಗೆ ಉಚಿತ ಮನೆ ನಿರ್ಮಿಸಿಕೊಡುವುದು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಡಿ.ಸಿ.ಸಿ. ಜಿಲ್ಲಾ ಸಮಿತಿ ಸಂಚಾಲಕ ಈರಪ್ಪ ಹಕ್ಕೋತ್ತಾಯಗಳ ಕುರಿತು ಮಾತನಾಡಿದರು. ಮುಖಂಡ ದೇವರಾಜ್ ಮಾತನಾಡಿ, ಸರಕಾರಿ ಅಧಿಕಾರಿಗಳು ಪರಿಶಿಷ್ಟರ ಪರವಾದ ಕೆಲಸ ಮಾಡಬೇಕು; ಸರಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಹಕ್ಕೊತ್ತಾಯಗಳಿಗೆ ಒಳಪಡುವ ದಾಖಲಾತಿ ವಿಲೇವಾರಿಯನ್ನು ವಿಳಂಬ ಮಾಡದೆ ಫಲಾನುಭವಿಗಳಿಗೆ ನ್ಯಾಯವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಪ್ರಗತಿಗಾಗಿ 22 ಸಾವಿರ ಕೋಟಿ ಅನುದಾನ ಬಂದಿದ್ದರೂ ಸರಕಾರ ಅದನ್ನು ಸದ್ಬಳಕೆ ಮಾಡುತ್ತಿಲ್ಲ; ಅನುದಾನವನ್ನು ಸದ್ಬಳಕೆ ಮಾಡುವಂತೆ ಆಗ್ರಹಿಸಿದರು.
ದಸಂಸ ಶನಿವಾರಸಂತೆ ಹೋಬಳಿ ಸಮಿತಿ ಸಂಚಾಲಕ ಸಿ.ಸಿ. ಲೋಕೇಶ್, ಕೊಡ್ಲಿಪೇಟೆ ದಸಂಸ ಮುಖಂಡರುಗಳಾದ ಸೋಮಣ್ಣ, ತಾಲೂಕು ಮುಖಂಡ ಕುಮಾರ್, ವಿಮಲಾಕ್ಷಿ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿ.ಸಿ. ಚಿಣ್ಣಪ್ಪ, ವೀರಭದ್ರ, ರಾಜೇಂದ್ರ, ಶಿವರಾಜು, ನವೀನ್ ಮುಂತಾದವರಿದ್ದರು.
ಮನವಿ ಪತ್ರವನ್ನು ಶನಿವಾರಸಂತೆ ಉಪ ತಹಶೀಲ್ದಾರ್ ಮಧುಸೂಧನ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರುಗಳಿಗೆ ಸಲ್ಲಿಸಿದರು.