ಮಡಿಕೇರಿ, ನ. 26: ದ್ವಿಚಕ್ರ ವಾಹನ ಓಡಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ತವ್ಯದಲ್ಲಿದ್ದ ಪೊಲೀಸರು ಸೇರಿ ಸಾರ್ವಜನಿಕರು ಯುವಕನೋರ್ವನಿಗೆ ದಾರಿ ಮಧ್ಯೆ ಬಡಿದಿರುವ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಡಿಕೇರಿಯ ಮಾರುಕಟ್ಟೆ ಬಳಿ ಸ್ಕೂಟಿಯಲ್ಲಿ ಬಂದ ಯುವಕನಿಗೆ ಮೊದಲಿಗೆ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ಬಡಿದರೆ, ನಂತರ ಅವರೆದುರೇ ಮಾರ್ಕೆಟ್‍ನ ಸಾರ್ವಜನಿಕ ವ್ಯಕ್ತಿಯೋರ್ವ ಬಡಿಯುತ್ತಾನೆ. ತದನಂತರ ಅಲ್ಲೇ ಇದ್ದ ಸಂಚಾರಿ ಪೊಲೀಸ್ ಸಹಾಯಕ ಠಾಣಾಧಿಕಾರಿ ಕೂಡ ಬಡಿಯುತ್ತಾರೆ. ಇದೇ ಒಂದು ಛಾನ್ಸ್ ಅಂತ ಅಲ್ಲಿದ್ದವರೆಲ್ಲ ಆ ಸ್ಕೂಟಿಯಲ್ಲಿ ಕುಳಿತ್ತಿದ್ದ ಯುವಕನನ್ನು ಮನ ಬಂದಂತೆ ಥಳಿಸಿದರು. ಮುಖದಲ್ಲಿ ಗಾಯವಾಗಿ ರಕ್ತ ಬಂದರೂ ಆ ಯುವಕ ತಲೆ ಬಗ್ಗಿಸಿ ತನಗೆ ಬೀಳುತ್ತಿದ್ದ ಪೆಟ್ಟನ್ನು ತಿನ್ನುತ್ತಿದ್ದ. ಓರ್ವ ವ್ಯಕ್ತಿಯಂತೂ ಆತ ಧರಿಸಿದ್ದ ಕೋಟನ್ನು ಹಿಂಬದಿಯಿಂದ ಎಳೆದು ಇನ್ನೇನು ಕೆಳಗೆ ಬೀಳಿಸಿ ಸಾಯಿಸುವದರಲ್ಲಿದ್ದ. ಇದೆಲ್ಲವನ್ನೂ ಪೊಲೀಸರು ನೋಡುತ್ತಲೇ ಇದ್ದರು. ನಂತರ ವಾಕಿಟಾಕಿ ಮೂಲಕ ಮಾಹಿತಿ ನೀಡಿ ಪೊಲೀಸ್ ಜೀಪ್ ಕರೆಯಿಸಿ ಆ ಯುವಕನನ್ನು ಠಾಣೆಗೆ ಕರೆದೊಯ್ದರು.

ಡ್ರಿಂಕ್ ಅಂಡ್ ಡ್ರೈವ್..!

ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಯುವಕ ಮದ್ಯ ಸೇವನೆ ಮಾಡಿರುವದಾಗಿ ಆತನನ್ನು ಪರೀಕ್ಷೆಗೆ ಒಳಪಡಿಸಿ, ಕೇಸ್ ದಾಖಲಿಸಿರುವದಾಗಿ ತಿಳಿದು ಬಂದಿದೆ. ಅಲ್ಲದೆ, ಆತ ಇಂದಿರಾಗಾಂಧಿ ವೃತ್ತದಿಂದ ಮಹದೇವಪೇಟೆ ಮಾರ್ಗವಾಗಿ ಏಕಮುಖ ರಸ್ತೆಯಲ್ಲಿ ಸಂಚರಿಸಿದ ಹಿನ್ನೆಲೆ ಯಲ್ಲಿ ವಾಹನ ತಡೆದಾಗ ನಿಲ್ಲಿಸ ದಿದ್ದಾಗ ಮಾರುಕಟ್ಟೆ ಬಳಿ ನಿಲ್ಲಿಸಿದಾಗ ಆತ ರಂಪಾಟ ಮಾಡಿದ ಕಾರಣಕ್ಕಾಗಿ ಆತನ ಮೇಲೆ ಕ್ರಮಕೈ ಗೊಂಡಿರು ವದಾಗಿ ಪೊಲೀಸ್ ಮೂಲ ಗಳು ತಿಳಿಸಿವೆ.

ಹುಟ್ಟು ಹಬ್ಬಕ್ಕೆ ಗಿಫ್ಟ್..!

ಆದರೆ ಆತನನ್ನು ನೋಡಿದ ಸ್ಥಳೀಯರ ಪ್ರಕಾರ ಇಂದು ಆತನ ಹುಟ್ಟು ಹಬ್ಬದ ದಿನವಾಗಿದ್ದು, ಬೆಳಿಗ್ಗೆ ಎ.ವಿ. ಶಾಲೆ ಬಳಿಯ ಆತನ ಅಕ್ಕಪಕ್ಕದ ಮನೆಯವರಿಗೆ ಸಿಹಿ ಹಂಚಿದ್ದಾನೆ. ಮಧ್ಯಾಹ್ನ ನಂತರ ಮಾರುಕಟ್ಟೆ ಬಳಿಯ ಸಲೂನ್‍ಗೆ ತೆರಳಿ ತಲೆಗೆ ಬಣ್ಣ ಹಚ್ಚಿಕೊಂಡು ಮನೆಯತ್ತ ಹೊರಟಿದ್ದನೆನ್ನಲಾಗಿದೆ. ಬಣ್ಣ ಹಚ್ಚಿದ ಕಾರಣಕ್ಕಾಗಿ ಹೆಲ್ಮೆಟ್ ಹಾಕಿರಲಿಲ್ಲ. ಹಾಗಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಆತನಿಗೆ ಕೆಟ್ಟದಾಗಿ ಬೈದದ್ದಕ್ಕಾಗಿ ಆತ ತನ್ನ ಸ್ಥಿಮಿತ ಕಳೆದುಕೊಂಡು ಆ ರೀತಿ ವರ್ತಿಸಿದ್ದಾನೆ ಎಂದು ಆತನನ್ನು ಕಂಡವರು ಹೇಳುತ್ತಾರೆ.

ಅಲ್ಲದೆ ಆ ಯುವಕ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡವನಾಗಿದ್ದು, ಕಾಲು ಕೂಡ ಮುರಿತಕ್ಕೊಳಗಾಗಿದೆ. ಆತನಿಗೆ ಈ ರೀತಿ ಹೊಡೆಯಬಾರದಿತ್ತು. ಕಾನೂನು ಉಲ್ಲಂಘನೆ ಮಾಡಿದಕ್ಕೆ ಕ್ರಮಕೈಗೊಳ್ಳುವ ಎಲ್ಲಾ ಅಧಿಕಾರ ಪೊಲೀಸರಿಗಿದೆ. ಆದರೆ ಹಲ್ಲೆ ಮಾಡುವಂತಿಲ್ಲ. ಅದೂ ಅಲ್ಲದೆ ಸಾರ್ವಜನಿಕರು ಮನಬಂದಂತೆ ಥಳಿಸುತ್ತಿದ್ದರೂ ಪೊಲೀಸರು ತಡೆಯದೇ ಇದ್ದುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿ ಬರುತ್ತಿದೆ. ಹುಟ್ಟು ಹಬ್ಬಕ್ಕೆ ಆ ಯುವಕನಿಗೆ ಒಳ್ಳೆಯ ಗಿಫ್ಟ್ ಸಿಕ್ಕಿದೆ..!