ಕುಶಾಲನಗರ, ನ. 27: ಕುಶಾಲನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರು ಪೋಲು ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಪಟ್ಟಣದಲ್ಲಿ ಕೆಲವು ಬಡಾವಣೆಗಳಲ್ಲಿ ಸಾರ್ವಜನಿಕ ನಲ್ಲಿಗಳನ್ನು ಅಳವಡಿಸಲಾಗಿದ್ದು ಇವುಗಳಿಂದ ನಿರಂತರವಾಗಿ ನೀರು ಚರಂಡಿ ಪಾಲಾಗುತ್ತಿರುವುದು ಬೆಳವಣಿಗೆಯಾಗಿದೆ. ಪಟ್ಟಣದ ದಂಡಿನಪೇಟೆ ಬಡಾವಣೆಯಲ್ಲಿ ರಸ್ತೆಯುದ್ದಕ್ಕೂ ಸಾರ್ವಜನಿಕ ನಲ್ಲಿಗಳನ್ನು ಅಳವಡಿಸಲಾಗಿದ್ದು ಸ್ಥಳೀಯ ನಿವಾಸಿಗಳ ನಿರ್ಲಕ್ಷ್ಯದಿಂದ ನಿರಂತರವಾಗಿ ಕುಡಿಯುವ ನೀರು ಪೋಲಾಗುತ್ತಿರುವ ಬಗ್ಗೆ ನಾಗರಿಕರು ದೂರಿದ್ದಾರೆ. ಕೆಲವು ನಲ್ಲಿಗಳಿಗೆ ಟ್ಯಾಪ್‍ಗಳು ಕೂಡ ಅಳವಡಿಸದಿರುವುದು ಕಂಡುಬಂದಿದೆ. ಕುಡಿಯುವ ನೀರಿಗೆ ಪರದಾಡುವಂತಹ ಸಂದರ್ಭದಲ್ಲಿ ಪೋಲು ಮಾಡುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ಅಧಿಕಾರಿಗಳನ್ನು ಸಾರ್ವಜನಿಕರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ. ಇವುಗಳಿಗೆ ಮೀಟರ್ ಅಳವಡಿಸುವ ಮೂಲಕ ನಿಯಂತ್ರಣ ಮಾಡಬೇಕು. ತಪ್ಪಿದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಪಂ ಅಧಿಕಾರಿ ಉದಯಕುಮಾರ್, ಕೆಲವೊಂದು ಕಡೆ ಕುಡಿಯುವ ನೀರು ಸರಬರಾಜು ಮಾಡುವ ಮಂಡಳಿ ಮೂಲಕ ಸಾರ್ವಜನಿಕ ನಲ್ಲಿಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಜಂಟಿಯಾಗಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
- ಸಿಂಚು