ಗೋಣಿಕೊಪ್ಪ ವರದಿ, ನ.. 27: ತಾ. 29 ರಂದು ಪೊನ್ನಂಪೇಟೆ ತಾಲೂಕು ಉದ್ಘಾಟನೆಗೊಳ್ಳಲಿದ್ದು, ಇಲ್ಲಿವರೆಗೂ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರೂ ಕೂಡ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮನವಿ ಮಾಡಿದ್ದಾರೆ.
ಕೋವಿಡ್ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಮುನ್ನವೇ ತಾಲೂಕು ಉದ್ಘಾಟಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಯಾರನ್ನು ಲಿಖಿತವಾಗಿ ಆಹ್ವಾನಿಸಲು ಸಮಯಾವಕಾಶ ಇಲ್ಲದಿರುವುದರಿಂದ ತಾಲೂಕು ಹೋರಾಟ ಸಮಿತಿ, ನಾಗರಿಕ ಹೋರಾಟ ಸಮಿತಿ ವತಿಯಿಂದ ಸಾರ್ವಜನಿಕವಾಗಿ ಎಲ್ಲರನ್ನು ಆಹ್ವಾನಿಸುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2 ದಶಕಗಳ ಹೋರಾಟ ಇತ್ಯರ್ಥಗೊಳ್ಳುತ್ತಿದೆ. ಇದಕ್ಕೆ ಕಾರಣಕರ್ತರಾದ ಸರ್ವರನ್ನು ನೆನೆಸಿಕೊಳ್ಳಬೇಕಿದೆ. ಜನರಿಗೆ ತುರ್ತಾಗಿ ಕೆಲಸಗಳು ನಡೆಯಬೇಕು ಎಂಬ ಕಾರಣಕ್ಕೆ ಉದ್ಘಾಟನೆ ಕಾರ್ಯಕ್ರಮವನ್ನು ಸರಳವಾಗಿ ತುರ್ತಾಗಿ ಮಾಡಲಾಗುತ್ತಿದೆ. ಕೋವಿಡ್ ಹರಡುವಿಕೆ ನಿಯಂತ್ರಣ, ಗ್ರಾ.ಪಂ. ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮುನ್ನ ಉದ್ಘಾಟಿಸಿ, ಎಲ್ಲಾ ರೀತಿಯ ಕಡತಗಳ ವಿಲೇವಾರಿ ಇಂತಹವುಗಳಿಗೆ ಅವಕಾಶ ಮಾಡಿಕೊಡಲು ಉದ್ದೇಶಿಸಿದಂತೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ತಾಲೂಕಿನ 22 ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಕೊಡವ ಸಮಾಜ, ಯುವ ಒಕ್ಕೂಟ, ಮಹಿಳಾ ಸಮಾಜ, ಎಲ್ಲಾ ಜನಾಂಗದ ಪರಮುಖರು, ಇಲ್ಲಿನ ಮೂಲ ನಿವಾಸಿಗಳು, ಜಾತಿಮತ, ಪಕ್ಷ, ಬೇಧ ಬಿಟ್ಟು ಬಂದ ಪ್ರತಿಯೊಬ್ಬರನ್ನು ಕೂಡ ಮಾಧ್ಯಮದ ಮೂಲಕ ಆಹ್ವಾನಿಸಲಾಗುತ್ತಿದೆ. ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ರೂ. 25 ಲಕ್ಷ ಅನುದಾನ ಕೂಡ ಬಿಡುಗಡೆಯಾಗಿದೆ. ಎಲ್ಲರನ್ನೂ ನೆನೆಸಿಕೊಳ್ಳುತ್ತಿದ್ದೇವೆ. 2002 ರಲ್ಲಿ ಕಂದಾಯ ಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ್ ಅವರಿಗೆ ಮನವಿ ಕೊಟ್ಟು ತಾಲೂಕು ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ವ್ಯವಹಾರ ಮುಂದುವರಿಸಲಾಗಿತ್ತು. ಇದೀಗ ಈಗಿನ ಕಂದಾಯ ಮಂತ್ರಿ ಆರ್. ಅಶೋಕ್ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ವಿ. ಸೋಮಣ್ಣ, ಸ್ಥಳಿಯ ಶಾಸಕ ಕೆ.ಜಿ. ಬೋಪಯ್ಯ ಪಾಲ್ಗೊಳ್ಳಲಿದ್ದಾರೆ. ಶೀಘ್ರದಲ್ಲಿ ಡಿವೈಎಸ್ಪಿ ನೇಮಕ ಮಾಡಿ ಇಲಾಖೆಗಳ ಕಾರ್ಯಕ್ಕೆ ಚಾಲನೆ ನೀಡಲು ಒತ್ತಾಯಿಸಲಾಗುವುದು ಎಂದರು.
ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಪೊಕ್ಕಳಿಚಂಡ ಬಿ. ಪೂಣಚ್ಚ ಮಾತನಾಡಿ, ತಾಲೂಕು ಕಚೇರಿಗೆ ಬೇಕಾದ ಮೂಲಭೂತ ಸೌಕರ್ಯಕ್ಕೆ ದಾನವಾಗಿ ಧನ ಸಹಾಯ ನೀಡಿದ ಪ್ರತಿಯೊಬ್ಬ ದಾನಿಯ ನೆರವು ಮುಖ್ಯವಾಗಿದೆ. ಈಗಾಗಲೇ ರೂ. 3 ಲಕ್ಷ ವೆಚ್ಚದಲ್ಲಿ ಪೀಠೋಪಕರಣ ಖರೀದಿಸಿ ಕಚೇರಿ ನಿರ್ವಹಣೆ ಮಾಡಲಾಗಿದೆ ಎಂದರು.
ಹೋರಾಟ ಸಮಿತಿ ಸದಸ್ಯ ಎಂ.ಟಿ. ಕಾರ್ಯಪ್ಪ ಮಾತನಾಡಿ, 70 ದಿನಗಳ ಹೋರಾಟಕ್ಕೆ ಕುಮಾರಸ್ವಾಮಿ ಸರ್ಕಾರ ಬೆಂಬಲವಾಗಿ ತಾಲೂಕು ಘೋಷಣೆ ನೀಡಿತ್ತು. ಇದರಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಸಲಹೆ ಕೂಡ ಇತ್ತು. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಾಂಗೇರ ಪದ್ಮಿನಿ ಮೂಲಕ ಘೋಷಣೆಗೆ ನೆರವಾಯಿತು. ಯಡಿಯೂರಪ್ಪ ಸರ್ಕಾರ ಉದ್ಘಾಟನೆ ಮಾಡುತ್ತಿದೆ. ಮಾಜಿ ಕಂದಾಯ ಮಂತ್ರಿ ಎಂ.ಪಿ. ಪ್ರಕಾಶ್ ಪೊನ್ನಂಪೇಟೆಯಲ್ಲಿ ನ್ಯಾಯಾಲಯ ಸ್ಥಾಪಿಸಿ ತಾಲೂಕು ಹೋರಾಟ ನಡೆಸುವಂತೆ ಸಲಹೆ ನೀಡಿದ್ದರು. ಅದರಂತೆ ಯಶಸ್ವಿಯಾಗಿದೆ. ಪಕ್ಷಾತೀತವಾಗಿ ಎಲ್ಲರೂ ಸ್ಪಂದಿಸಿದ್ದಾರೆ ಎಂದರು.
ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ, ಗಿರಿಜನರು ಕೂಲಿ ಬಿಟ್ಟು ಹೋರಾಟದಲ್ಲಿ ಭಾಗವಹಿಸಿದ್ದರು. ವಿವಿಧ ಸ್ತ್ರೀಶಕ್ತಿ ಸಂಘದ ಸದಸ್ಯರು ಕೂಡ ಕೆಲಸ ಬಿಟ್ಟು ತೊಡಗಿಕೊಂಡಿದ್ದು, ಯಶಸ್ವಿಗೆ ಮುನ್ನುಡಿ ಎಂದರು.