ಶ್ರೀಮಂಗಲ, ನ. 27: ಪೊನ್ನಂಪೇಟೆ - ಹುದಿಕೇರಿ ನಡುವಿನ ರಾಜ್ಯ ಹೆದ್ದಾರಿಯ ನಡಿಕೇರಿ ಗ್ರಾಮದಲ್ಲಿ ಕಾರೊಂದು ಒವರ್ಟೇಕ್ ಮಾಡುವ ಸಂದರ್ಭ ಎದುರಿನಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಕಾಫಿ ತೋಟಕ್ಕೆ ನುಗ್ಗಿದೆ.
ತಿರುವಿನಲ್ಲಿ ಒವರ್ಟೇಕ್ ಮಾಡಿ ಎದುರಿನಿಂದ ಬಂದ ವಾಹನವನ್ನು ಕಂಡು ಸುಮಾರು 40 ಮೀಟರ್ ದೂರದಿಂದ ಬ್ರೇಕ್ ಹಾಕಿದರೂ ಕಾರು ನಿಲ್ಲದೆ ಎದುರಿನ ವಾಹನಕ್ಕೆ ಗುದ್ದಿ ಬಲಬದಿಯ ಕಾಫಿ ತೋಟಕ್ಕೆ ನುಗ್ಗಿದೆ. ಅದೃಷ್ಟವಶಾತ್ ಎರಡು ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಸಮೀಪದಲ್ಲಿ 11 ಕೆವಿ ವಿದ್ಯುತ್ ಮಾರ್ಗವಿದ್ದರೂ ಅದಕ್ಕೆ ಬಡಿಯದೆ ಸ್ವಲ್ಪದರಲ್ಲಿ ಅಪಾಯ ತಪ್ಪಿದೆ.
ಪಾಲಿಬೆಟ್ಟದಿಂದ ನೌಶದ್ ಎಂಬುವರ ಕಾರು ಪೊನ್ನಂಪೇಟೆ ಮೂಲಕ ಕೇರಳಕ್ಕೆ ಮತ್ತು ತೆರಾಲು ಗ್ರಾಮದಿಂದ ಮುತ್ತಣ್ಣ ಎಂಬುವರ ಕಾರು ಗೋಣಿಕೊಪ್ಪಕ್ಕೆ ತೆರಳುತ್ತಿದ್ದ ಸಂದರ್ಭ ಈ ಅಪಘಾತವಾಗಿದೆ. ಅಜಾಗರೂಕತೆ ಚಾಲನೆ ಮಾಡಿದ ಚಾಲಕ ನೌಶಾದ್ಗೆ ಬುದ್ಧಿವಾದ ಹೇಳಿದ ಸ್ಥಳೀಯರು ರಾಜಿ ಮೂಲಕ ಪ್ರಕರಣ ತೀರ್ಮಾನಿಸಿ ತೋಟದೊಳಗೆ ನುಗ್ಗಿದ್ದ ಕಾರನ್ನು ಸ್ಥಳೀಯರು ಜೀಪಿನ ಮೂಲಕ ಎಳೆದು ಸಹಾಯ ಮಾಡಿದರು.