ಸೋಮವಾರಪೇಟೆ, ನ. 25: ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರ್ಕಾರಗಳಿದ್ದು, ಪಕ್ಷದ ಕಾರ್ಯಕರ್ತರು ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮವಹಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಎಲ್ಲಾ ಜನರಿಗೂ ಉಪಯೋಗ ವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಎಲ್ಲಾ ವರ್ಗದ ಜನರಿಗೂ ಮಾಹಿತಿ ಒದಗಿಸಬೇಕು. ನೋಟ್ ಬ್ಯಾನ್, ಸರ್ಜಿಕಲ್ ಸ್ಟ್ರೈಕ್, ಅಯೋಧ್ಯೆ ರಾಮಮಂದಿರ ವಿವಾದ ಇತ್ಯರ್ಥ ಸೇರಿದಂತೆ ಹಲವಷ್ಟು ಕ್ರಾಂತಿಕಾರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಂಜನ್ ಹೇಳಿದರು.

ನರೇಂದ್ರ ಮೋದಿ ಅವರ ಆಡಳಿತದಿಂದಾಗಿ ದೇಶದಲ್ಲಿ ಭಯೋತ್ಪಾದನೆಗೆ ಕಡಿವಾಣ ಹಾಕಲಾಗುತ್ತಿದೆ. ಪ್ರಪಂಚದಲ್ಲಿಯೇ ಭಾರತ ಸದೃಢ ದೇಶವಾಗಿ ಬೆಳೆಯುತ್ತಿದೆ. ಕೇಂದ್ರ ಸರ್ಕಾರ ದೇಶದ ರೈತರಿಗೆ ವಾರ್ಷಿಕ 6000 ಪ್ರೋತ್ಸಾಹ ಧನ ನೀಡುವ ಮೂಲಕ ರೈತರಿಗೆ ನೆರವು ಒದಗಿಸುತ್ತಿದೆ. ಇದರೊಂದಿಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ರೈತರಿಗೆ 4 ಸಾವಿರ ಒದಗಿಸುವ ಮೂಲಕ ವಾರ್ಷಿಕ ಒಟ್ಟು 10 ಸಾವಿರ ನೀಡುವ ಯೋಜನೆ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಮುಖಂಡರು ಹಾಗೂ ಕಾರ್ಯ ಕರ್ತರು ಪಕ್ಷವನ್ನು ಸಂಘಟಿಸಬೇಕು. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಕಾರ್ಯಯೋಜನೆ ರೂಪಿಸಬೇಕು ಎಂದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಹ ಪ್ರಬಾರಿ ಬಿ.ಬಿ. ಭಾರತೀಶ್ ಮಾತನಾಡಿ, ಕಾರ್ಯಕರ್ತರು ಪ್ರಾಥಮಿಕವಾಗಿ ಪಕ್ಷದ ಉದಯ, ಸಿದ್ಧಾಂತ, ವೈಚಾರಿಕ ನೆಲಗಟ್ಟಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಪ್ರಸ್ತುತ ನಮ್ಮದೇ ಪಕ್ಷದ ಸರ್ಕಾರಗಳಿದ್ದು, ಕಾರ್ಯಕರ್ತರು ಸರ್ಕಾರ ಹಾಗೂ ಸಂಘಟನೆಯ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬಿಜೆಪಿ ದೇಶಾದ್ಯಂತ ಬಲಗೊಳ್ಳುತ್ತಿದ್ದು, ಪ್ರಪಂಚದಲ್ಲಿಯೇ ಅತೀ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ವೈಚಾರಿಕತೆ ಹಾಗೂ ಸರ್ಕಾರಗಳ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುವ ಮೂಲಕ ಪಕ್ಷವನ್ನು ಇನ್ನಷ್ಟು ಸಂಘಟಿಸಬೇಕು ಎಂದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ ವಹಿಸಿದ್ದರು. ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ ಸೇರಿದಂತೆ ಜಿ.ಪಂ., ತಾ.ಪಂ. ಸದಸ್ಯರುಗಳು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.