ಸುಂಟಿಕೊಪ್ಪ, ನ. 25: ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದ ಬಳಿ ನೂತನವಾಗಿ ನಿರ್ಮಿಸಲಾಗಿರುವ ಗ್ಯಾಲರಿ ಮೇಲ್ಚಾವಣಿಯ ಮೇಲೆ ವಿದ್ಯುತ್ ಸಂಪರ್ಕ ತಂತಿ ತಗುಲಿ ಕೊಂಡಿದ್ದು ಮಕ್ಕಳು ಹಾಗೂ ಕ್ರೀಡಾ ಪಟುಗಳ ಜೀವಕ್ಕೆ ಕಂಟಕವಾಗಿದೆ.

ನಿತ್ಯ ನೂರಾರು ಮಕ್ಕಳು, ಯುವಕ ಕ್ರೀಡಾಪಟುಗಳು ಹಾಗೂ ನಿತ್ಯ ವಾಯು ವಿಹಾರಿಗಳು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನ ವನ್ನು ವಾಕಿಂಗ್‍ಗಾಗಿ ಅವಲಂಭಿ ಸಿದ್ದಾರೆ. ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಗ್ಯಾಲರಿಗೆ ನೂತನವಾಗಿ ಮೇಲ್ಚಾವಣಿಯನ್ನು ನಿರ್ಮಿಸಲಾಗಿದೆ. ಈ ಮೇಲ್ಚಾವಣಿಯ ಮೇಲೆ ವಿದ್ಯುತ್ ಕಂಬಗಳಿದ್ದು, ಇದರಿಂದ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾದ ವಿದ್ಯುತ್ ತಂತಿ ಕ್ರೀಡಾಂಗಣದ ಮೇಲ್ಚಾವಣಿಯ ಮೇಲೆಯೇ ಹಾದುಹೋಗಿದೆ.

ಈ ಮೈದಾನದಲ್ಲಿ ನಿತ್ಯ ನೂರಾರು ಮಂದಿ ವಾಯು ವಿಹಾರ ಮಾಡುತ್ತಾರೆ. ಆಟವಾಡಲು ಮಕ್ಕಳು ಹಾಗೂ ಕ್ರೀಡಾಪಟುಗಳು ಬರುತ್ತಾರೆ. ವಿದ್ಯುತ್ ಸಂಪರ್ಕ ತಂತಿ ಮೇಲ್ಚಾವಣಿಯ ಮೇಲೆ ಬಿದ್ದಿದ್ದು, ಅದರಿಂದ ವಿದ್ಯುತ್ ಸ್ಪರ್ಶಗೊಂಡರೇ ಜೀವಹಾನಿಯ ಭಯವಿದೆ. ಕೂಡಲೇ ಸಂಬಂಧಿಸಿ ಇಲಾಖಾಧಿಕಾರಿಗಳು ಗಮನಹರಿಸಿ ಮೇಲ್ಚಾವಣಿಯ ತಂತಿಗಳನ್ನು ತೆರವುಗೊಳಿಸುವಂತೆ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ.