ಆಲೂರು-ಸಿದ್ದಾಪುರ, ನ. 25: ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್. ಲೀಲಾಕುಮಾರ್ ಸಂಘದ ವಾರ್ಷಿಕ ವರದಿ ಮಂಡಿಸಿದರು. ಆಲೂರು-ಸಿದ್ದಾಪುರ ಪ್ರಾ,ಕೃ.ಪ.ಸ. ಸಂಘದಲ್ಲಿ 2982 ಮಂದಿ ಸದಸ್ಯರಿದ್ದು ಒಟ್ಟು 1 ಕೋಟಿ 22 ಲಕ್ಷದ 77 ಸಾವಿರದ 431 ರೂಪಾಯಿ ಪಾಲು ಹಣ ಇರುತ್ತದೆ ಎಂದರು. ಸಂಘದಲ್ಲಿ 2020 ಕ್ಕೆ ಒಟ್ಟು 6 ಕೋಟಿ 40 ಲಕ್ಷದ 61 ಸಾವಿರದ 136 ರೂ. ಠೇವಣಾತಿಗಳಿರುತ್ತದೆ ಎಂದು ಅವರು ಹೇಳಿದರು. ಸಂಘದಿಂದ ಸದಸ್ಯರಿಗೆ 2019-20ನೇ ಸಾಲಿಗೆ 9 ಕೋಟಿ 39 ಲಕ್ಷದ 40 ಸಾವಿರದ 598 ರೂ. ಕೆ.ಸಿ.ಸಿ. ಸಾಲ ವಿತರಿಸಲಾಗಿದ್ದು, ಆಭರಣ ಸಾಲ 77 ಲಕ್ಷದ 20 ಸಾವಿರದ 220 ರೂ., ಸ್ವಸಹಾಯ ಗುಂಪು ಸಾಲ 58 ಲಕ್ಷದ 55 ಸಾವಿರ ವಿತರಿಸಲಾಗಿದೆ ಎಂದರು. ಸಂಘದ ವ್ಯಾಪ್ತಿಯಲ್ಲಿ 91 ಸ್ವ-ಸಹಾಯ ಗುಂಪುಗಳಿದ್ದು ಸಂಘವು ವಿತರಿಸಿದ ಸಾಲವನ್ನು ಸ್ವ-ಸ್ವಹಾಯ ಸಂಘಗಳು ಶೇ. 97 ರಷ್ಟು ಸಾಲ ಮರುಪಾವತಿಸಿದ್ದಾರೆ ಎಂದರು. ಸಂಘವು 2010-20ನೇ ಸಾಲಿನಲ್ಲಿ 1 ಕೋಟಿ 79 ಲಕ್ಷದ 57 ಸಾವಿರದ 482 ರೂ. ವ್ಯಾಪಾರ ವಹಿವಾಟು ನಡೆಸಿ 8 ಲಕ್ಷದ 7 ಸಾವಿರದ 228 ರೂ. ವ್ಯಾಪಾರ ಲಾಭಗಳಿಸಿದ್ದು 2019-20ನೇ ಸಾಲಿಗೆ ಸಂಘವು 15 ಲಕ್ಷದ 27 ಸಾವಿರದ 939 ರೂ. ನಿವ್ವಳ ಲಾಭಗಳಿಸಿದೆ ಎಂದರು.
ಆಲೂರು-ಸಿದ್ದಾಪುರ ವ್ಯಾಪ್ತಿಯ ರೈತರು ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನು ಅನುಭವಿಸುತ್ತಿದ್ದು, ಸಂಕಷ್ಟ ಎದುರಿಸುತ್ತಿರುವ ನಿಟ್ಟಿನಲ್ಲಿ ಸಾಲಗಾರರು ಮುಂದಿನ ಸಾಲಿನಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗದು ಈ ನಿಟ್ಟಿನಲ್ಲಿ ಸಂಘವು ಮುಂದಿನ ಸಾಲಿನಲ್ಲಿ ಸಾಲ ಮರುಪಾವತಿಸಲು ಒತ್ತಡ ಹೇರದೆ ಸಾಲ ನವೀಕರಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಭೆಯಲ್ಲಿ ಸಹಕಾರಿಗಳು ಒತ್ತಾಯಿಸಿದರು.
ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನದ ಮೊತ್ತವನ್ನು ಏರಿಕೆ ಮಾಡುವಂತೆ ಸಹಕಾರಿಗಳು ಒತ್ತಾಯಿಸಿದರು. ಸಂಘದ ಪ್ರಗತಿ ಮತ್ತು ಲೋಪದೋಷಗಳ ಬಗ್ಗೆ ಹಿರಿಯ ಸಹಕಾರಿಗಳಾದ ಸಿ.ಕೆ. ಚಂದ್ರಶೇಖರ್, ಹೆಚ್.ಎಸ್. ಪ್ರೇಮ್‍ನಾಥ್, ದೇವಪ್ಪ ಮುಂತಾದವರು ಮಹಾಸಭೆಯಲ್ಲಿ ಚರ್ಚಿಸಿ ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಕಳೆದ ಸಾಲಿಗಿಂತ ಈ ಸಾಲಿನಲ್ಲಿ ರೂ. 17 ಲಕ್ಷಕಿಂತ ಹೆಚ್ಚಿನ ನಿವ್ವಳ ಲಾಭಗಳಿಸಿದ್ದು, ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭಗಳಿಸಲು ಸಹಕಾರಿ ಸದಸ್ಯರು ಸಹಕರಿಸಬೇಕೆಂದರು. ಸಂಘವು ಉತ್ತಮವಾಗಿ ಮತ್ತು ಉತ್ತಮ ವ್ಯವಹಾರ ನಡೆಸುತ್ತಿರುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಡಿ.ಸಿ.ಸಿ. ಬ್ಯಾಂಕ್ ನಮ್ಮ ಸಂಘಕ್ಕೆ ಉತ್ತಮ ಕಾರ್ಯನಿರ್ವಹಣೆಗಾಗಿ ತಾಲೂಕು ಪ್ರಶಸ್ತಿ ನೀಡಿದ್ದು ಮುಂದೆ ಇದೇ ರೀತಿ ನಿಮ್ಮೆಲ್ಲಾರ ಸಹಕಾರ ಪ್ರೋತ್ಸಾಹದಿಂದ ಸಂಘದ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಎಸ್. ವೀಣಾ, ನಿರ್ದೇಶಕರಾದ ಹೆಚ್.ಎಸ್. ಸುಂದರೇಶ್, ಎ.ಜಿ. ವಿಜಯ್, ಸಿ.ಕೆ. ದೇವಯ್ಯ, ಪಿ.ಕೆ. ಭರತ್‍ಕುಮಾರ್, ಎಸ್.ಟಿ. ಯಶೋಧ, ಜಾಹ್ನವಿ, ಬಿ.ಇ. ಧರ್ಮಪ್ಪ, ಹೆಚ್.ಕೆ. ಮಲ್ಲೇಶ್, ಕೆ.ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ನವೀನ್‍ಕುಮಾರ್, ಸಂಘದ ಲೆಕ್ಕಾಧಿಕಾರಿ ಕೆ.ಡಿ. ಚಂದ್ರಮತಿ, ಸಿಬ್ಬಂದಿ ಪ್ರವೀಣ್ ಮುಂತಾದವರಿದ್ದರು.