ಕಣಿವೆ, ನ. 25: ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗಿನಲ್ಲಿ ಇರುವ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗ ದಿರುವುದು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಬೇಸರ ಮೂಡಿಸುತ್ತಿದೆ.ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭೂರಮೆಯ ನಾಡು, ಪುಷ್ಪಗಿರಿ ವನ್ಯಜೀವಿ ವಿಭಾಗದಲ್ಲಿ ಇರುವ ಮಾಂದಲಪಟ್ಟಿ ಅಭಿವೃದ್ಧಿ ವಿಚಾರದಲ್ಲಿ ಕೊಡಗು ಜಿಲ್ಲಾಡಳಿತ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಮಾತ್ರ ದೂರದಿಂದ ಧಾವಿಸುವ ಪ್ರವಾಸಿಗರಿಗೆ ಅಸಹನೆ ಮೂಡಿಸುವಂತಿದೆ.

ವನ್ಯಜೀವಿ ವಿಭಾಗಕ್ಕೆ ಒಳಪಡುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಗೊಳಿಸುವಂತಿಲ್ಲ ಎಂಬ ನಿಯಮ ಗಳೇನಾದರು ಇದ್ದರೆ, ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ಅಥವಾ ಸಂಬಂಧಿತ ಅರಣ್ಯ ಇಲಾಖೆ ನಿಷೇಧಿಸಲಿ. ಆದರೆ, ಪ್ರವಾಸಿಗರಿಂದ ಪ್ರವೇಶ ಶುಲ್ಕ ಪಡೆಯುವ ಇಲಾಖೆ ಪ್ರವಾಸಿಗರಿಗೆ ಮೂಲ ಸೌಲಭ್ಯ ನೀಡದಿರುವುದು ಯಾವ ನ್ಯಾಯ ಎಂದು ಇಲ್ಲಿಗೆ ಧಾವಿಸಿ ಇಲ್ಲಿನ ಪ್ರಕೃತಿ ಸೌಂದರ್ಯ ಸವಿದು ಮರಳುವ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ.ಸಮುದ್ರ ಮಟ್ಟದಿಂದ 1,310 ಮೀಟರ್ ಎತ್ತರವಿರುವ ಮಾಂದಲ ಪಟ್ಟಿಯ ನಯನ ಮನೋಹರ ಬೆಟ್ಟಗಳು ಹಾಗೂ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಬೆಟ್ಟಗಳನ್ನು ನೋಡಿ ಅವುಗಳು ಸ್ವಾಭಾವಿಕವಾಗಿ ತೊಟ್ಟು ನಳನಳಿಸುವ ಹಸಿರ ಉಡುಗೆಗಳನ್ನು ನೋಡಿ ಕಣ್ತುಂಬಿಸಿಕೊಳ್ಳಲು ಬಹು ದೂರದಿಂದ ಧಾವಿಸುವ ಪ್ರವಾಸಿಗರಿಗೆ ಇಲ್ಲಿನ ರಸ್ತೆಯ ಅವ್ಯವಸ್ಥೆ ಭಾರೀ ನಿರಾಸೆಯನ್ನು ಮೂಡಿಸುತ್ತದೆ. ಅಷ್ಟೇ ಅಲ್ಲ. ಕೊಡಗಿನ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳಿಗೆ ಪ್ರವಾಸಿ ತಾಣಗಳ ಅಭಿವೃದ್ಧಿಯ ಕನವರಿಕೆಗಳ ಬಗ್ಗೆ ಇರುವ ಅಸ್ಪಷ್ಟತೆಯನ್ನು ಅಣಕಿಸುತ್ತವೆ. ಕೊಡಗು ಜಿಲ್ಲೆ ಹೇಳಿ ಕೇಳಿ ಪ್ರವಾಸಿ ಜಿಲ್ಲೆ. ದೇಶದ ಅನೇಕ ರಾಜ್ಯಗಳ ಅಷ್ಟೇ ಏಕೆ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರು ಪ್ರತೀ ವರ್ಷ ಬಂದು ಹೋಗುತ್ತಾರೆ.

ಈ ಪ್ರವಾಸಿಗರಿಂದ ವಾರ್ಷಿಕ ವಾಗಿ ಕನಿಷ್ಟ ಎಂದರೂ ರೂ. 40 ರಿಂದ 50 ಲಕ್ಷ ಆದಾಯಗಳಿಸುವ ಇಲಾಖೆ, ಈ ಹಣವನ್ನು ಮರಳಿ ಈ ತಾಣದ ಅಭಿವೃದ್ಧಿಗೆ ಬಳಸಿದರೆ ಆಗುವುದಿಲ್ಲವೇ ಎಂಬುದು ಪ್ರವಾಸಿಗರ ಪ್ರಶ್ನೆ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ 18 ಕಿ.ಮೀ. ದೂರದಲ್ಲಿರುವ ಮಾಂದಲಪಟ್ಟಿಗೆ

(ಮೊದಲ ಪುಟದಿಂದ) ತೆರಳುವ ರಸ್ತೆ ಅಲ್ಲಲ್ಲಿ ಕಲ್ಲು ಗುಂಡಿಗಳಿಂದ ಕೂಡಿದೆ. ಆದರೂ ಪ್ರವಾಸಿಗರು ನಿಸರ್ಗದ ಸೌಂದರ್ಯ ಸವಿಯುವ ತವಕದಿಂದ ಈ ಅವ್ಯವಸ್ಥೆಯ ರಸ್ತೆಯಲ್ಲಿ ಪ್ರಯಾಸಪಟ್ಟು ತೆರಳುತ್ತಾರೆ. ಆದರೆ, ಮಾಂದಲಪಟ್ಟಿ ಇನ್ನು ಕೇವಲ ಮೂರರಿಂದ ಮೂರುವರೆ ಕಿ.ಮೀ. ಹತ್ತಿರವಿರುವಾಗ ಇರುವ ರಸ್ತೆ ಇದೆಯಲ್ಲಾ... ಆ ರಸ್ತೆಯಲ್ಲಿ ವಾಹನಗಳಿರಲಿ, ಪಾದಚಾರಿಗಳು ಸಂಚರಿಸಲಾಗದ ದುಸ್ಥಿತಿಗೆ ತಲುಪಿದ್ದರೂ ಕೂಡ ಜಿಲ್ಲಾಡಳಿತ ಈ ತಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಏಕೆ ಅಭಿವೃದ್ಧಿ ಪಡಿಸುವತ್ತ ಮುಂದಾಗಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಮಾಂದಲಪಟ್ಟಿಯ ಆಸುಪಾಸಿನ ಮೂರರಿಂದ ಮೂರುವರೆ ಕಿ.ಮೀ. ನಷ್ಟು ದೂರದಲ್ಲಿ ಬೃಹತ್ ಕಲ್ಲುರಾಶಿಗಳು ಬಾಯ್ದೆರೆದಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ. ರಸ್ತೆಯೇ ಕುರುಹು ಇಲ್ಲದ ಭಯಾನಕವಾದ ಈ ಮಾರ್ಗದಲ್ಲಿ ‘ಫೋರ್‍ವೀಲ್ ಡ್ರೈವ್’ ಇರುವ ಜೀಪುಗಳು ಮಾತ್ರ ಚಲಿಸಲು ಸಾಧ್ಯ. ಆ ಜೀಪಿನ ಚಾಲಕನ ಕೈಯಲ್ಲಿ ಆ ಜೀಪಿನೊಳಗೆ ಪಯಣಿಸುವವರ ಜೀವ ಇರುತ್ತದೆ. ಆದರೂ ಭಯಾನಕವಾದ ದುರ್ಗಮವಾದ ಈ ರಸ್ತೆಯಲ್ಲಿ ಬೃಹತ್ ಕಲ್ಲುಗಳು ಹಾಗೂ ಪಾತಾಳದಂತಹ ಗುಂಡಿಗಳಲ್ಲಿ ವಾಹನ ಚಾಲಿಸುವ ಚಾಲಕರಿಗೆ ಪ್ರವಾಸಿಗರೂ ಸಲಾಂ ನೀಡದೇ ಮರಳುವುದಿಲ್ಲ.

ಮೈಸೂರಿನಿಂದ ಸಾಫ್ಟ್‍ವೇರ್ ಉದ್ಯೋಗಿ ಯಶವಂತ್ ಹಾಗೂ ಸ್ನೇಹಿತರು ಮೈಸೂರಿನಿಂದ 145 ಕಿ.ಮೀ. ದೂರದ ಮಾಂದಲಪಟ್ಟಿ ಪ್ರವೇಶ ದ್ವಾರದವರೆಗೆ ಧಾವಿಸಲು ಒಂದು ಸಾವಿರ ರೂಪಾಯಿಗಳ ಡೀಸೆಲ್ ಹಾಕಿದ್ದೇನೆ. ಆದರೆ ಇಲ್ಲಿ ರಸ್ತೆ ಹಾಳಾಗಿದೆ ಎಂಬ ಕಾರಣಕ್ಕೆ ಜೀಪಿನಲ್ಲಿ ಕರೆದೊಯ್ಯಲು ಒಂದು ಸಾವಿರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆಯ ಮಾರ್ಗವೇ ಸರಿಯಿಲ್ಲದ ದುರ್ಗಮವಾದ ರಸ್ತೆಯಲ್ಲಿ ಬರುವ ಬೆರಳೆಣಿಕೆಯ ಪ್ರವಾಸಿಗರಿಂದ ಕಳೆದ 2019 ರಲ್ಲಿ ಅರಣ್ಯ ಇಲಾಖೆ ವಾರ್ಷಿಕ ರೂ. 50 ರಿಂದ 60 ಲಕ್ಷ ಆದಾಯಗಳಿಸಿತ್ತು. ಅಂದರೆ ಪ್ರವಾಸಿಗರನ್ನು ಕರೆತರುವ ಜೀಪುಗಳಿಗೆ ತಲಾ 50 ರೂ.. ಪ್ರವಾಸಿಗರಿಗೆ ತಲಾ 25 ರೂ., ಮಕ್ಕಳಿಗೆ 10 ರೂ., ವಿದೇಶಿ ಪ್ರವಾಸಿಗರಿಗೆ ತಲಾ ರೂ. 100 ಹೀಗೆ ಸಂಗ್ರಹಿಸಿದ ಹಣ ವಾರ್ಷಿಕ ರೂ. 50 ರಿಂದ 60 ಲಕ್ಷವಾಗಿದೆ.

ಆದರೆ ಜಿಲ್ಲಾಡಳಿತ ಈ ತಾಣದ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಪ್ರವಾಸಿಗರ ವಾಹನಗಳು ನೇರವಾಗಿ ಮಾಂದಲಪಟ್ಟಿ ತಾಣಕ್ಕೆ ಬರುವ ವ್ಯವಸ್ಥೆ ಆದಲ್ಲಿ ಆ ಪ್ರವಾಸಿ ವಾಹನಗಳವರು ತಲಾ ರೂ. 100 ಬೇಕಾದರೂ ಇಲಾಖೆಗೆ ಪ್ರವೇಶ ಶುಲ್ಕವಾಗಿ ನೀಡಬಲ್ಲರು.

ಆವಾಗ ಇಲಾಖೆಗೆ ವಾರ್ಷಿಕ ಕೋಟಿಗಟ್ಟಲೇ ಆದಾಯ ಬರುವ ಸಂಭವ ಇರುವ ವಾಸ್ತವಾಂಶವನ್ನು ಜಿಲ್ಲಾಡಳಿತ ಮನಗಾಣಬೇಕಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಷ್ಟು ಕೊಡಗು ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಗಳು, ಹೊಟೇಲ್, ಲಾಡ್ಜ್, ಹೋಮ್ ಸ್ಟೇ ವ್ಯವಹಾರಗಳ ವೇಗವೂ ಹೆಚ್ಚುತ್ತದೆ. ಇಲಾಖೆಗೂ ಆದಾಯ ಬರುತ್ತದೆ. ಅಭಿವೃದ್ಧಿಯೇ ಇಲ್ಲವಾದಲ್ಲಿ ಪ್ರವಾಸಿಗರು ಬರುವುದಾದರು ಎಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲವೇ...? - ಕೆ.ಎಸ್. ಮೂರ್ತಿ