ವೀರಾಜಪೇಟೆ, ನ. 25: ಮಡಿಕೇರಿಯ ಕೋಟೆ ಹಾಗೂ ಅರಮನೆಯ ಕಟ್ಟಡದ ನವೀಕರಣದ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಭಾರತೀಯ ಪುರಾತತ್ವ ಇಲಾಖೆಗೆ ಆದೇಶಿಸಿದೆ. ರಾಜ್ಯ ಸರಕಾರ ಇದರ ನವೀಕರಣಕ್ಕಾಗಿ ಈ ಹಿಂದೆಯೇ ರೂಪಾಯಿ ಹತ್ತು ಕೋಟಿ ಎಪ್ಪತ್ತಾರು ಲಕ್ಷದ ನಲ್ವತ್ತೈದು ಸಾವಿರದ ಎಂಟು ನೂರನ್ನು ಮಂಜೂರು ಮಾಡಿರುವುದರಿಂದ ಕಾಮಗಾರಿ ಆರಂಭಿಸಿ ಅದರ ಅಭಿವೃದ್ಧಿಯ ಪ್ರಗತಿಯ ವರದಿಯನ್ನು ಜನವರಿ 12-2021 ಕ್ಕೆ ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಿದೆ.
ಮಡಿಕೇರಿಯ ಪುರಾತನ ಕೋಟೆ ಹಾಗೂ ಅರಮನೆ ಶಿಥಿಲಾವಸ್ಥೆ ಯಲ್ಲಿದ್ದು ಇದನ್ನು ಸ್ಮಾರಕವಾಗಿ ಸಂರಕ್ಷಿಸಲು ನವೀಕರಣಗೊಳಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಆದೇಶಿಸುವಂತೆ ಐ.ಎ.ಎಸ್. ನಿವೃತ್ತ ಅಧಿಕಾರಿ ಜೆ.ಎಸ್. ವಿರುಪಾಕ್ಷಯ್ಯ ಅವರು ಈ ಹಿಂದೆ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ ನಂತರ ರಾಜ್ಯ ಸರಕಾರ ಅರಮನೆ ಕೋಟೆಯ ಅಭಿವೃದ್ಧಿಗಾಗಿ ಹಣವನ್ನು ಮಂಜೂರು ಮಾಡಿತ್ತು. ಮುಂದಿನ ಮಳೆಗಾಲಕ್ಕೂ ಮುನ್ನವೇ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಗೊಳ್ಳದಿದ್ದರೆ ಶಿಥಿಲಗೊಂಡಿರುವ ಕಟ್ಟಡ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವಿರುಪಾಕ್ಷಯ್ಯ (ಮೊದಲ ಪುಟದಿಂದ) ಅವರ ಪರ ಹಿರಿಯ ವಕೀಲ ಎನ್. ರವೀಂದ್ರನಾಥ್ ಕಾಮತ್ ಅವರು ಇಂದು ವಿಭಾಗೀಯ ಪೀಠದ ಮುಂದೆ ವಾದಿಸಿದರು.
ರಾಜ್ಯ ಸರಕಾರ ಮಂಜೂರು ಮಾಡಿರುವ ಅನುದಾನದ ಹಣದಲ್ಲಿ ಶೇ. 23ರಷ್ಟನ್ನು ಸೇವಾ ಶುಲ್ಕವಾಗಿ ಪಾವತಿಸುವಂತೆ ಪುರಾತತ್ವ ಇಲಾಖೆ ಬೇಡಿಕೆ ಇಟ್ಟಿದ್ದು ಈ ಸೇವಾ ಶುಲ್ಕ ಪಾವತಿಸಿದರೆ ಅಭಿವೃದ್ಧಿ ಕಾಮಗಾರಿ ವೆಚ್ಚಕ್ಕೆ ಹಣದ ಕೊರತೆ ಉಂಟಾಗಲಿದೆ ಎಂದು ವಿರುಪಾಕ್ಷಯ್ಯ ಅವರ ಮತ್ತೊಂದು ಅರ್ಜಿಗೆ ನ್ಯಾಯಾಲಯ ಸೇವಾ ಶುಲ್ಕ ವಸೂಲಿ ಮಾಡದಂತೆ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ ಪುರಾತತ್ವ ಇಲಾಖೆ ಈ ಆದೇಶದ ವಿರುದ್ಧ ರಿಟ್ ಸಲ್ಲಿಸಿ ಸೇವಾ ಶುಲ್ಕ ಪಾವತಿಸಲು ಆದೇಶಿಸುವಂತೆ ಇದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಮಡಿಕೇರಿ ಕೋಟೆ ಹಾಗೂ ಅರಮನೆ ವಿವಾದದ ವಿಚಾರಣೆ ನಡೆಸಿದರು. ಸರಕಾರದ ಪರ ವಿಜಯ್‍ಕುಮಾರ್ ಪಾಟೀಲ್ ಹಾಗೂ ಪುರಾತತ್ವ ಇಲಾಖೆಯ ಪರ ಮಧುಕರ್ ಪಾಂಡೆ ವಾದಿಸಿದರು.