ಭಾಗಮಂಡಲ, ನ. 25: ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘವು 2019-20 ರ ಸಾಲಿನಲ್ಲಿ 18.79 ಲಕ್ಷ ರೂ. ಲಾಭಗಳಿಸಿದ್ದು, ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಜೆ.ಸತೀಶ್ ಕುಮಾರ್ ಹೇಳಿದರು. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 3932 ಸದಸ್ಯರನ್ನು ಹೊಂದಿದ್ದು 100 ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. 1806.29 ಲಕ್ಷ ರೂ. ದುಡಿಯುವ ಬಂಡವಾಳವನ್ನು ಹೊಂದಿದೆ. ಸಂಘವು ಸದಸ್ಯರಿಗೆ 14 ವಿವಿಧ ಬಗೆಯ ಸಾಲಗಳನ್ನು ನೀಡುತಿದ್ದು, ಒಟ್ಟು 1754 ಸದಸ್ಯರಿಗೆ ರೂ.1497.38 ಲಕ್ಷ ರೂ.ಸಾಲ ನೀಡಲಾಗಿದೆ. ಈ ಪೈಕಿ 467 ರೈತರಿಗೆ ರೂ.525.43 ಲಕ್ಷ ರೂ. ಕೃಷಿ ಸಾಲ ನೀಡಲಾಗಿದೆ. ಸಂಘವು ಠೇವಣಿದಾರರಿಗೆ ಉತ್ತಮ ಬಡ್ಡಿ ನೀಡುತ್ತಿದ್ದು 1171.13 ಲಕ್ಷ ರೂ. ಠೇವಣಿ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ 1108 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ. ಒಟ್ಟು 174.46 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಸಲಾಗಿದೆ ಎಂದರು.
ಸಂಘದಲ್ಲಿ ಮರಣನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಲಾಕರ್ ವ್ಯವಸ್ಥೆ ಮಾಡಲಾಗಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು. ಸಂಘದ ಸದಸ್ಯರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.ಸಂಘದ ಸದಸ್ಯರಾದ ಎ.ಕೆ.ಅಪ್ಪಣ್ಣ ಮತ್ತು ಎ.ಎ.ಮಾಯಮ್ಮ ದಂಪತಿಯ ಪುತ್ರ ಎ.ಲಿಶಾನ್ 2019-20 ಸಾಲಿನಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.98.66 ರಂತೆ 592 ಅಂಕಗಳಿಸಿದ್ದು, ಕಾಲೇಜಿಗೆ ಪ್ರಥಮ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿರುವ ಹಿನ್ನೆಲೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಜೆ.ಎಸ್. ನಂಜುಂಡಪ್ಪ ವಂದಿಸಿದರು