ಮಡಿಕೇರಿ, ನ. 25: ಕೋಳಿಯ ಮೊಟ್ಟೆಗಳನ್ನು ಸಂಗ್ರಹಿಸಿ ವಿದ್ಯುತ್ ಬೆಳಕಿನ ಶಾಖದಿಂದ ಮರಿಗಳನ್ನು ಸೃಷ್ಟಿಸುವ ಪ್ರಯತ್ನವೊಂದರಲ್ಲಿ ಮಾದಾಪುರ ಬಳಿಯ ಜಂಬೂರು ಗ್ರಾಮದ ಕೃಷಿಕ ಪಿ.ಎಸ್. ರತೀಶ್ ಯಶಸ್ವಿಯಾಗಿದ್ದಾರೆ.
ಅವರ ಅನುಭವದ ಪ್ರಕಾರ ಈ ರೀತಿಯಾಗಿ ಅಂದಾಜು ಅರವತ್ತು ದಿನಗಳ ಅಂತರದಲ್ಲಿ ಕೋಳಿ ಮರಿಗಳು ಹುಟ್ಟು ಪಡೆಯಲಿವೆಯಂತೆ. ಇಂತಹ ತಾಂತ್ರಿಕತೆಯನ್ನು ರತೀಶ್ ಪುತ್ರ ಸೂರ್ಯ ಸುಲಭವಾಗಿ ಅಳವಡಿಸಿದ್ದಾಗಿದೆ.
ಒಂದು ‘ಥರ್ಮಕೂಲ್ ಬಾಕ್ಸ್’ ಸಿದ್ಧಗೊಳಿಸಿ ಅದರಲ್ಲಿ ಸ್ವಲ್ಪ ಭತ್ತದ ಹೊಟ್ಟು ಹರಡಲಾಗಿದೆ. ಆ ಮುಖಾಂತರ ಕೋಳಿ ಮೊಟ್ಟೆಗಳನ್ನು ಕ್ರಮವಾಗಿ ಜೋಡಿಸಿಡಲಾಗಿದೆ. ಒಂದಿಷ್ಟು ದಿವಸ ಸರಾಸರಿ 35 ಡಿಗ್ರಿಯಷ್ಟು ವಿದ್ಯುತ್ ಶಾಖವನ್ನು ಈ ಮೊಟ್ಟೆಗಳಿಗೆ ಒದಗಿಸಲಾಗುತ್ತದೆ. ಅಲ್ಲದೆ, ದಿನಕ್ಕೆ ನಾಲ್ಕು ಬಾರಿ ಮೊಟ್ಟೆಗಳನ್ನು ಸರಿಯಾಗಿ ಶಾಖ ಸ್ಪರ್ಶವಾಗುವಂತೆ ಹೊರಳಾಡಿಸಲಾಗುತ್ತದೆ.
ಈ ರೀತಿ ಮಾಡುವುದರಿಂದ ಸುಮಾರು 22ರಿಂದ 25 ದಿನಗಳಲ್ಲಿ ಮೊಟ್ಟೆ ಒಡೆದು ಕೋಳಿಮರಿಗಳು ಹೊರಬರಲಿವೆ. ಆ ಬಳಿಕ ಈ ಕೋಳಿಮರಿಗಳನ್ನು 60 ವೋಲ್ಟೇಜ್ ವಿದ್ಯುತ್ ಬಲ್ಬುವಿನ ಬೆಳಕಿನಡಿ ಪೋಷಿಸಲಾಗುತ್ತದೆ. ಹೀಗೆ ಒಂದಿಷ್ಟು ದಿನಗಳ ಆರೈಕೆ ಬಳಿಕ ಕೋಳಿಮರಿಗಳು ಸಹಜ ಸ್ಥಿತಿಗೆ ಬರುವುದರೊಂದಿಗೆ, ನಂತರದ ದಿನಗಳಲ್ಲಿ ಸ್ವತಂತ್ರ ರೀತಿಯಲ್ಲಿ ಕಾಳುಕಡ್ಡಿ ಸೇವನೆ ಆರಂಭಿಸಲಿವೆ.
ಬದಲಾಗಿ ಇತರ ಕೋಳಿಗಳಂತೆ ತಾಯಿಯನ್ನು ಅವಲಂಬಿಸದೆ ಮರಿಗಳು ಸ್ವತಂತ್ರವಾಗಿ ಬೆಳೆಯುತ್ತವೆ ಎನ್ನುವುದು ರತೀಶ್ ಅವರ ಅನುಭವದ ಮಾತಾಗಿದೆ. ಒಟ್ಟಿನಲ್ಲಿ ಸರಳ ರೀತಿಯ ಈ ಕೃತಕ ಕೋಳಿಮರಿ ಸಾಕಾಣಿಕೆ ಮತ್ತು ಮರಿಗಳಿಗೆ ಬೇಡಿಕೆ ಕೂಡ ಲಭಿಸುತ್ತಿದೆ ಎನ್ನುವುದು ಅವರ ಅನಿಸಿಕೆ.
ಕಡಕ್ನಾತ್ ತಳಿ: ಮಹಾರಾಷ್ಟ್ರ ಪ್ರಾಂತ್ಯದಲ್ಲಿ ವ್ಯಾಪಕವಾಗಿ ಸಂವರ್ಧನೆಗೊಳ್ಳುತ್ತಿರುವ ಈ ಕಡಕ್ನಾತ್ ತಳಿಯ ಕೋಳಿ ಮತ್ತು ಮೊಟ್ಟೆಗಳು ಔಷಧಿಯ ಗುಣದಿಂದ ಕೂಡಿದ್ದು, ಹಲವಷ್ಟು ರೋಗ ನಿರೋಧಕ ಶಕ್ತಿ ಹೊಂದಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಈ ಕೋಳಿಗಳು ಒಂದು ರೀತಿ ಕಾಡು ಕೋಳಿಗಳನ್ನು ಹೋಲುವಂತಿವೆ.