ಮಡಿಕೇರಿ, ನ. 24: ಸಭೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕೈಗೊಳ್ಳುವ ನಿರ್ಣಯಗಳು ಸಮರ್ಪಕವಾಗಿ ಅನುಷ್ಠಾನವಾಗುವದಿಲ್ಲ ಎಂದು ಕೆಲ ತಾಲೂಕು ಪಂಚಾಯಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಡಿಕೇರಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಲೂಕು ಪಂಚಾಯಿತಿಯ ಎಸ್‍ಜೆಎಸ್‍ವೈ ಸಭಾಂಗಣದಲ್ಲಿ ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯ ನಾಗೇಶ್ ಕುಂದಲ್ಪಾಡಿ ಪ್ರತಿ ಸಭೆಯಲ್ಲೂ ಒಂದೇ ವಿಚಾರಕ್ಕೆ ಚರ್ಚೆಗಳು ನಡೆಯುತ್ತವೆ. ನಿರ್ಣಯಗಳು ದಾಖಲಾಗುತ್ತವೆ ಆದರೆ ದಾಖಲಾದ ನಿರ್ಣಯಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವದಿಲ್ಲ. ನಿರ್ಣಯಗಳು ಅನುಷ್ಠಾನವಾಗುತ್ತಿವೆಯೇ ಎಂಬ ಬಗ್ಗೆ ಅಧ್ಯಕ್ಷರೂ ಕೂಡ ಗಮನ ಹರಿಸುವದಿಲ್ಲ ಎಂದು ದೂರಿದರು. ಮತ್ತೊಬ್ಬ ಸದಸ್ಯ ಕೊಡಪಾಲು ಗಣಪತಿ ಮಾತನಾಡಿ, ಸಭೆ ಎಂದ ಮೇಲೆ ಗಂಭೀರತೆ ಇರಬೇಕು. ಇಲ್ಲಿನ ತೀರ್ಮಾನಗಳು ಕಾರ್ಯರೂಪಕ್ಕೆ ಬರಬೇಕು. ಹಾಗಾಗದಿದ್ದ ಮೇಲೆ ಸಭೆ ನಡೆಸಿ ಪ್ರಯೋಜವೇನು ಎಂದು ಪ್ರಶ್ನಿಸಿದರು. ತಾಲೂಕು ಪಂಚಾಯಿತಿಗೆ ಅದರದೇ ಆದ ಜವಾಬ್ದಾರಿಯಿದೆ ಅದನ್ನು ಸಮರ್ಪಕವಾಗಿ ನಿಭಾಯಿಸಲು ಅಧ್ಯಕ್ಷರು ಕ್ರಮವಹಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ದಬ್ಬಡ್ಕ ಶ್ರೀಧರ್ ಹೇಳಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷೆ ಶೋಭಾಮೋಹನ್ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳ ಅನುಷ್ಠಾನ ಸಂಬಂಧ ತಾನು ಗಮನ ಹರಿಸುತ್ತಿದ್ದೇನೆ. ವೃಥಾ ಆರೋಪ ಸರಿಯಲ್ಲ ಎಂದರು. ಹಾಗಾದರೆ ಪ್ರತಿ ಬಾರಿ ಕೆಲವೊಂದು ವಿಚಾರಗಳಲ್ಲಿ ಅಧಿಕಾರಿಗಳು ಒಂದೇ ಉತ್ತರವನ್ನು ನೀಡುವುದೇಕೆ ಎಂದು ನಾಗೇಶ್ ಕುಂದಲ್ಪಾಡಿ ಪ್ರಶ್ನಿಸಿದರು. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು. ಯಾವದೇ ಇಲಾಖೆಯಾದರೂ ಸಂಬಂಧಿಸಿದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿನ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮೊದಲು ಮಾಹಿತಿ ನೀಡಬೇಕು. ಆ ಮೂಲಕ ಫಲಾನುಭವಿಗಳ ಆಯ್ಕೆ ಕ್ರಮಕೈಗೊಳ್ಳಬೇಕು ಹೊರತಾಗಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಬಾರದೆಂದು ನಾಗೇಶ್ ಕುಂದಲ್ಪಾಡಿ ಮನವಿ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ದಬ್ಬಡ್ಕ ಶ್ರೀಧರ್ ಇದಕ್ಕೆ ದನಿಗೂಡಿದರು.
ಸಭೆಯ ಅನುಪಾಲನಾ ವರದಿಯನ್ನು ಒಂದು ವಾರ ಮುಂಚಿತವಾಗಿ ಸದಸ್ಯರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರೂ ಅದು ಕಾರ್ಯಗತಗೊಳ್ಳುತ್ತಿಲ್ಲ. ಸಭೆಗೆ ಬಂದ ಬಳಿಕ ವರದಿ ನೀಡಿದರೆ ಕಳೆದ ಸಭೆಯ ಪ್ರಗತಿಯ ಬಗ್ಗೆ ಸಮಗ್ರ ಮಾಹಿತಿ ಪಡೆಯುವದಾದರೂ ಹೇಗೆ ಎಂದು ನಾಗೇಶ್ ಕುಂದಲ್ಪಾಡಿ ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಕೊಡಪಾಲು ಗಣಪತಿ ಅನುಪಾಲನಾ ವರದಿಯನ್ನು ಸಭೆಯ ಮುಂಚಿತವಾಗಿ ಸದಸ್ಯರುಗಳಿಗೆ ತಲಪಿಸುವ ಕೆಲಸವಾಗಬೇಕೆಂದರು. ಈ ವೇಳೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ತೊಂದರೆಯಾಗುತ್ತಿದೆ ಎಂದು ಅಧ್ಯಕ್ಷೆ ಶೋಭಾ ಮೋಹನ್ ಪ್ರತಿಕ್ರಿಯಿಸಿದಾಗ ಪ್ರತಿ ಬಾರಿಯೂ ಸಿಬ್ಬಂದಿ ಕೊರತೆ ಎಂದು ಹೇಳುವದಾದರೆ ಅದಕ್ಕೆ ಪರಿಹಾರ ಸಿಗುವದೆಂದು ಎಂದು ಸದಸ್ಯೆ ಕುಮುದಾ ಪ್ರಶ್ನಿಸಿದರು.
ಅರಣ್ಯ ಹಕ್ಕು ಅರ್ಜಿ ಶೀಘ್ರವಾಗಿ ಇತ್ಯರ್ಥ ಪಡಿಸಲು ಸೂಕ್ತ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶೋಭಾ ಮೋಹನ್ ಸೂಚಿಸಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಮಾತನಾಡಿ ಮಡಿಕೇರಿ ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ 347 ಮತ್ತು ಇತರೆ ಜನಾಂಗದ 610 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ ಪರಿಶಿಷ್ಟ ಪಂಗಡದ 218 ಕ್ಲೈಮುಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ತಿರಸ್ಕøತ ಕ್ಲೈಮುಗಳ ಪುನರ್ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ ತಿರಸ್ಕøತಗೊಂಡ ಪರಿಶಿಷ್ಟ ಪಂಗಡದ 129 ಅರ್ಜಿಗಳಲ್ಲಿ 110 ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಲಾಗಿದ್ದು, ಇವುಗಳಲ್ಲಿ 30 ಕ್ಲೈಮುಗಳನ್ನು ಅಂಗೀಕರಿಸಲಾಗಿದೆ. ಉಳಿದಂತೆ 482 ಕ್ಲೈಮುಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.
ಪಶುಪಾಲನಾ ಇಲಾಖೆಯ ದಯಾನಂದ ಅವರು ಮಾತನಾಡಿ ಆ್ಯಸಿಲ್ ಕೋಳಿ ಸಾಕಾಣಿಕೆ ಮಾಡಲು ಕೋಳಿ ಉತ್ಪನ್ನ ಮಾರಾಟ ಸಹಕಾರ ಸಂಘ ಬೆಂಗಳೂರು ಇವರು 52 ಸಾವಿರಗಳ ಸಾಲ ಒದಗಿಸುತ್ತಿದ್ದು, ಸಾಮಾನ್ಯ ವರ್ಗದವರಿಗೆ 26 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 47 ಸಾವಿರಗಳ ಸಹಾಯ ಧನ ನೀಡಲಾಗುತ್ತದೆ. ಕೋಳಿ ಸಾಕಾಣಿಕೆ ಫಲಾನುಭವಿಗಳಿಗೆ ಸಹಾಯ ಧನದ ಜೊತೆಗೆ ಕೋಳಿ ಮನೆ ಹಾಗೂ 22 ವಾರದ 20 ಕೋಳಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಫಲಾನುಭವಿಗಳ ಆಯ್ಕೆ ಮಾಡಿ ವರದಿಯನ್ನು ಸಹಾಯಕ ನಿರ್ದೇಶಕರು ಪಶುಪಾಲನಾ ಇಲಾಖೆ ಮಡಿಕೇರಿ ಇವರಿಗೆ ಸಲ್ಲಿಸುವಂತೆ ಗ್ರಾಮ ಪಂಚಾಯತ್ ಪಿಡಿಓ ಗಳಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ತಾ.ಪಂ.ಇಒ ಲಕ್ಷ್ಮಿ ಮಾತನಾಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ತಾ.ಪಂ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಇದರಿಂದ ಅರ್ಹರು ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಹಾಗೂ ಮಧ್ಯ ವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ ಸೂಕ್ತ ಹಾಗೂ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ಒದಗಿಸಬೇಕು. ಹಾಗೂ ನಿಯಮಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳ ಕುರಿತಂತೆ ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ತಾ.ಪಂ.ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ತಹಶೀಲ್ದಾರ್ ಮಹೇಶ್, ತಾ.ಪಂ.ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.