ಸೋಮವಾರಪೇಟೆ, ನ. 24: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರೂ. 4.15 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿರುವ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣದ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಅಪ್ಪಚ್ಚುರಂಜನ್, ಒಂದು ವೇಳೆ ಕಾಮಗಾರಿ ಕಳಪೆಯಾದರೆ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಎಚ್ಚರಿಸಿದರು.

ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿ ಕಳಪೆಯಾಗುತ್ತಿರುವ ಬಗ್ಗೆ ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿಯ ಸದಸ್ಯರು ಶಾಸಕರ ಗಮನ ಸೆಳೆದಿದ್ದ ಹಿನ್ನೆಲೆ ಖುದ್ದು ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಂಜನ್, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಹೈದರಾಬಾದ್ ಮೂಲದ ಗ್ರೇಟ್ ಸ್ಫೋಟ್ರ್ಸ್ ಇನ್‍ಫ್ರಾ ಪ್ರೈ.ಲಿ. ಸಂಸ್ಥೆ ವತಿಯಿಂದ ರೂ. 4.15ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ವಿಳಂಬ ಹಾಗೂ ರಾತ್ರಿ ಸಮಯದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕಾಮಗಾರಿಯು ಕ್ರಿಯಾಯೋಜನೆ ಯಂತೆ ನಡೆಯುತ್ತಿಲ್ಲ. ಗುಣನಿಯಂತ್ರಣ ಅಧಿಕಾರಿಗಳೂ ಸಹ ಕಾಮಗಾರಿಯ ಗುಣಮಟ್ಟದ ಬಗ್ಗೆ ವರದಿ ನೀಡಿದ್ದು, ಕಾಮಗಾರಿ ಸಮರ್ಪಕವಾಗಿ ನಡೆಯದ ಬಗ್ಗೆ ತಿಳಿದುಬಂದಿದೆ ಎಂದು ಸಮಿತಿಯ ವರು ಶಾಸಕರ ಗಮನ ಸೆಳೆದರು.

ಈ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಭಿಯಂತರ ಹರೀಶ್ ಅವರಿಗೆ ಸೂಚನೆ ನೀಡಿದ ರಂಜನ್, ತಕ್ಷಣ ಸಮಸ್ಯೆ ಬಗೆಹರಿಸಬೇಕು. ಮೈದಾನದ ಮೇಲೆ ಹೆಚ್ಚುವರಿಯಾಗಿ 10 ಎಂಎಂ ಸೀಲ್‍ಕೋಟ್ ಅಳವಡಿಸಿ, ಚರಂಡಿ ಕಾಮಗಾರಿಯನ್ನು ಸಮರ್ಪಕ ಗೊಳಿಸುವಂತೆ ಸೂಚಿಸಿದರು.

ಕಾಮಗಾರಿ ನಡೆಯುವ ಸಂದರ್ಭ ಇಲಾಖೆಯ ಅಭಿಯಂತರರು ಹಾಗೂ ಕಂಪೆನಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಬೇಕು. ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಸಬಾರದು ಎಂದು ಸೂಚನೆ ನೀಡಿದರು.

ಈ ಸಂದರ್ಭ ಗ್ರೇಟ್ ಸ್ಫೋಟ್ರ್ಸ್ ಇನ್‍ಫ್ರಾ ಪ್ರೈ.ಲಿ. ಸಂಸ್ಥೆಯ ನಿರ್ದೇಶಕ ಜಾನ್, ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯರಾದ ಎಸ್. ಮಹೇಶ್, ಬಿ.ಎಂ. ಸುರೇಶ್, ಅಶೋಕ್, ಯಶ್ವಂತ್, ಅಭಿಷೇಕ್, ಪಿ. ಮಧು, ಯತೀಶ್, ಲಕ್ಷ್ಮೀಕಾಂತ್, ವಿಕ್ರಂಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.