*ಗೋಣಿಕೊಪ್ಪಲು, ನ. 23: ಸಹಕಾರ ಸಂಘಗಳಿಂದ ನೀಡುವ ಕೃಷಿ ಸಾಲ ಮನ್ನಾ ಸೌಲಭ್ಯ, ಆರ್.ಟಿ.ಸಿ. ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರಿಗೆ ಲಭಿಸುವಂತೆ ಮರು ಪರಿಶೀಲನೆ ಅವಶ್ಯಕ ಎಂದು ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಒತ್ತಾಯಿಸಿದ್ದಾರೆ. ಬಾಳೆಲೆ ಬ್ಯಾಂಕ್ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣಗಣಪತಿ ಮಾತನಾಡಿ ಕೆಸಿಸಿ ಸಾಲ ಮತ್ತು ಮಧ್ಯಂತರ ಸಾಲವನ್ನು ಆರ್ಟಿಸಿ ಹೊಂದಿರುವ ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಕೆಸಿಸಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಎಕರೆ ಒಂದಕ್ಕೆ ರೂ 89 ಸಾವಿರ ನೀಡಲಾಗುವುದು. ಮಧ್ಯಂತರ ಸಾಲವನ್ನು ಶೇ.3 ರ ಬಡ್ಡಿ ದರದಲ್ಲಿ ಎಕರೆ ಒಂದಕ್ಕೆ ರೂ 1 ಲಕ್ಷ ನೀಡಲು ಅವಕಾಶವಿದೆ. ಒಂದು ಕುಟುಂಬದಲ್ಲಿ ಇತರರು ಆರ್ಟಿಸಿ ಹೊಂದಿದ್ದರೂ ಅವರಿಗೆ ಸಾಲ ಪಡೆಯಲು ಅವಕಾಶವಿಲ್ಲ. ಇದರಿಂದ ರೈತರಿಗೆ ತೀರಾ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂಥ ಅನ್ಯಾಯದ ಬಗ್ಗೆ ಸರ್ಕಾರದ ಗಮನಸೆಳೆಯಲು ಜಿಲ್ಲಾ ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದೊಂದಿಗೆ ಗಂಭೀರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
2019-20ನೇ ಸಾಲಿನಲ್ಲಿ ಬ್ಯಾಂಕು ರೂ 35.99ಲಕ್ಷ ದಷ್ಟು ಲಾಭಗಳಿಸಿದೆ. ಪಾಲು ಬಂಡವಾಳ ರೂ 163.51 ಲಕ್ಷ ದಷ್ಟಿದೆ. ಪ್ರಸಕ್ತ ಸಾಲಿನಲ್ಲಿ ಶೇ,93 ರಷ್ಟು ಸಾಲ ವಸೂಲಾತಿಯಾಗಿದೆ. ರೂ. 1230 ಲಕ್ಷ ಠೇವಣಿ ಸಂಗ್ರಹಿಸಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕಿನಿಂದ ರೂ 360.30ಲಕ್ಷ ವನ್ನು ಸಾಲ ಪಡೆದುಕೊಳ್ಳಲಾಗಿದೆ. ಬ್ಯಾಂಕಿನಲ್ಲಿ 1736 ಸದಸ್ಯರಿದ್ದು ಶೇ.15ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲ ಮನ್ನ ವಿಚಾರದಲ್ಲಿ ರೈತರಿಗೆ ಸೂಕ್ತ ನ್ಯಾಯ ಲಭಿಸುತ್ತಿಲ್ಲ. ಸರ್ಕಾರ ರೂಪಿಸಿರುವ ಸಾಲ ಮನ್ನ ವಿಷಯದ ರೂಪು ರೇಷೆಗಳನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಬಾಳೆಲೆ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಆದೇಂಗಡ ಎನ್.ಅಶೋಕ್ ಒತ್ತಾಯಿಸಿದರು.
ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ರೂಪಿಸಿರುವ ಸಾಲಮನ್ನ ಯೋಜನೆಯಂತೆ ಪಡಿತರ ಕಾರ್ಡಿನಲ್ಲಿರುವ ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಸಾಲ ಮನ್ನಾ ಯೋಜನೆ ಅನ್ವಯವಾಗಲಿದೆ. ಕುಟುಂಬದ ಇತರ ಸದಸ್ಯರು ಭೂಮಿ ಆರ್ಟಿಸಿ ಹೊಂದಿದ್ದರೂ ಅವರಿಗೆ ಸಾಲ ಮನ್ನಾ ಲಭಿಸುವುದಿಲ್ಲ. ಆರ್ಥಿಕವಾಗಿ ತೀರ ತೊಂದರೆ ಅನುಭವಿಸುತ್ತಿರುವ ರೈತರಿಗೆ ಬಹು ದೊಡ್ಡ ಹೊಡೆತ ಬೀಳಲಿದೆ. ಇದನ್ನು ಪುನರ್ ಪರಿಶೀಲನೆ ಮಾಡುವಂತೆ ಸಹಕಾರ ಬ್ಯಾಂಕ್ಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಬ್ಯಾಂಕಿನ ಆಡಳಿತ ಮಂಡಳಿ ಉಪಾಧ್ಯಕ್ಷೆ ಮಾಚಂಗಡ ಆರ್.ಗಾಯತ್ರಿ, ನಿರ್ದೇಶಕರಾದ ಆದೇಂಗಡ ಕೆ.ಚಂದ್ರಶೇಖರ್, ಪೋಡಮಾಡ ಸಿ.ನಾಚಪ್ಪ, ಕಾಂಡೇರ ತೇಜ, ಮಾಚಂಗಡ ಎಂ.ಮುತ್ತಣ್ಣ, ಕಳ್ಳಿಚಂಡ ಬಿ ಚಿತ್ರಾ, ಅಡ್ಡೇಂಗಡ ಆರ್.ಗೀತಾ, ಟಿ.ಕೆ.ಚಂದ್ರ, ಕೆ.ಆರ್.ಗಜಾನನ, ಎಚ್.ಎಚ್.ಗಣೇಶ್, ಪಂಜರಿಯರ ಲಲಿತಾ, ಎಚ್.ಎಂ.ಬಸವರಾಜ್, ಸಿಇಒ ಅಳಮೇಂಗಡ ಎ.ಯಶೋಧ, ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್, ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ಸಿ.ವಿಠಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ, ಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಮುಖಂಡರಾದ ಮೇಚಂಡ ಸೋಮಯ್ಯ, ಎಂ.ಸಿ.ನಾಣಯ್ಯ, ಬೋಸ್ ಪೆಮ್ಮಯ್ಯ, ಎಂ.ಎನ್.ಮಾಚಯ್ಯ ಹಾಜರಿದ್ದರು.