ವೀರಾಜಪೇಟೆ, ನ. 23: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನಗರೋತ್ಥಾನದ ಮೂರನೇ ಹಂತದ ಕಾವiಗಾರಿಯನ್ನು ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಮುಖ್ಯ ಅಭಿಯಂತರ ಸತ್ಯನಾರಾಯಣ್ ಅವರು ವೀರಾಜಪೇಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಅವರು ಗಡಿನಾಡ ಅಭಿವೃದ್ದಿ ಇಲಾಖೆಯಿಂದ ಮೂರು ಕೋಟಿ ಅನುದಾನ ಕೊಡಿಸುವುದಾಗಿ ನೀಡಿದ ಭರವಸೆಯ ಮೇರೆಗೆ ಈಗಿರುವ ಕಚೇರಿ ಕಟ್ಟಡಗಳ ಕಾಮಗಾರಿಗಳು, ಪುರಭವನ, ಮುಖ್ಯಾಧಿಕಾರಿಗಳ ವಸತಿ ಗೃಹಗಳ ಪರಿಶೀಲನೆ ನಡೆಸಿದ ನಂತರ ಮಾತನಾಡಿ ಈಗಿರುವ ಪಟ್ಟಣ ಪಂಚಾಯಿತಿಯ ಕಚೇರಿಗಳು ಚಿಕ್ಕದಾಗಿದ್ದು ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ವಿಶಾಲಗೊಳಿಸಿ ಆಧುನೀಕರಣ ಗೊಳಿಸಲಾಗುವುದು. ಪಟ್ಟಣಕ್ಕೆ ನೀರು ಪೊರೈಕೆಯಾಗುತ್ತಿರುವ ಬೇತ್ರಿ ಕಾವೇರಿ ಹೊಳೆ ನೀರಿನ ಮೂಲ ಸ್ಥಾವರದಿಂದ ಕದನೂರಿನವರೆಗೆ ಹೊಸ ಪೈಪ್‍ಲೈನ್ ಆಳವಡಿಸಲಾಗಿದೆ. ಕದನೂರಿನಿಂದ ವೀರಾಜಪೇಟೆಯ ಶಿವಕೇರಿ ನೀರಿನ ಶೇಖರಣೆ ಸ್ಥಾವರದವರೆಗೆ ಹಳೆಯ ಪೈಪುಗಳಗೆ ಜೋಡಣೆ ಮಾಡಲಾಗಿದೆ ಇದರಿಂದ ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಪತ್ರಕರ್ತರು ಗಮನ ಸೆಳೆದಾಗ ಪಟ್ಟಣ ಪಂಚಾಯಿತಿ ಕಿರಿಯ ಅಭಿಯಂತರ ಹೇಮಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡು ಪಟ್ಟಣಕ್ಕೆ ಪ್ರತಿದಿನ 25 ಲಕ್ಷ ಲೀಟರ್ ನೀರಿನ ಬೇಡಿಕೆ ಇದೆ. ಪ್ರಸ್ತುತ ಇರುವ 8 ಇಂಚು ಪೈಪ್‍ಗಳಲ್ಲಿ 16 ಲಕ್ಷ ನೀರು ಸಂಗ್ರಹವಾಗುತ್ತಿದೆ. ನೀರಿನ ಪೈಪ್‍ಗಳ ಉನ್ನತೀಕರಣಕ್ಕೆ ಪ್ರಸ್ತಾವನೆ ಕಳುಹಿಸಲು ತಿಳಿಸಲಾಗಿದೆ. ಶೀಘ್ರದಲ್ಲಿಯೆ ನೀರಿನ ಸಮಸ್ಯೆಯನ್ನು ಬಗೆ ಹರಿಸಲಾಗುವುದು ಎಂದು ಹೇಳಿದರು.

ಇದರ ನಂತರ ಸುಮಾರು 220 ವರ್ಷಗಳ ಹಿಂದಿನ ಪ್ರಾಚೀನ ಕಾಲದ ಸಂತ ಅನ್ನಮ್ಮ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ನಗರ ಯೋಜನಾ ನಿರ್ದೇಶಕರ ಸ್ಥಳೀಯ ಸಂಸ್ಥೆಗಳ ಸಹಾಯಕ ಅಭಿಯಂತರ ನಟರಾಜ್, ಮುಖ್ಯಾಧಿಕಾರಿ ಶ್ರೀಧರ್, ಕಿರಿಯ ಅಭಿಯಂತರ ಹೇಮಕುಮಾರ್, ಟಿ.ಎಂ.ಸಿ ತಾಂತ್ರಿಕ ಸಲಹೆಗಾರ ನವೀನ್ ಉಪಸ್ಥಿತರಿದ್ದರು.