ಕುಶಾಲನಗರ, ನ. 23: ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶ ಕಲ್ಪಿಸಲು ಅಗತ್ಯವಾಗಿ ಒದಗಿಸಬೇಕಾದ ಕೋವಿಡ್-19 ಪರೀಕ್ಷಾ ವರದಿ ಕೆಲವೊಂದು ವಿದ್ಯಾರ್ಥಿಗಳಿಗೆ ಒಂದು ವಾರ ಕಳೆದರೂ ತಲುಪದೆ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾದ ಘಟನೆ ಕುಶಾಲನಗರ ವ್ಯಾಪ್ತಿಯಲ್ಲಿ ವರದಿಯಾಗಿದೆ. ನವೆಂಬರ್ 17 ರಂದು ಅಂತಿಮ ಪದವಿಯ ಕೆಲವು ವಿದ್ಯಾರ್ಥಿಗಳು ಕುಶಾಲನಗರ ಸರಕಾರಿ ಆಸ್ಪತ್ರೆಯ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಗಂಟಲು ದ್ರವ ಸಂಗ್ರಹ ಮಾಡಿ 7 ದಿನ ಕಳೆದರೂ ತಲುಪದ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಲು ಪರದಾಡಬೇಕಾದ ಪರಿಸ್ಥಿತಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸೃಷ್ಠಿಯಾಯಿತು.
ಈ ಬಗ್ಗೆ ಮಡಿಕೇರಿ ಕೋವಿಡ್ ಕೇಂದ್ರಕ್ಕೆ ಸಂಪರ್ಕಿಸಿ ಪರೀಕ್ಷಾ ವರದಿ ಪಡೆಯಬೇಕಾದ ಪರಿಸ್ಥಿತಿ ಕೂಡ ಉಂಟಾಯಿತು. ಪರೀಕ್ಷಾ ವರದಿ ಪರಿಶೀಲಿಸಲು ಒದಗಿಸಿರುವ ವೆಬ್‍ಸೈಟ್ ಲಿಂಕ್‍ನಲ್ಲಿ ಯಾವುದೇ ಮಾಹಿತಿ ಲಭ್ಯವಾಗದಿರುವುದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕೆಂದು ಪೋಷಕರು ಪತ್ರಿಕೆ ಮೂಲಕ ಕೋರಿದ್ದಾರೆ.