ಕುಶಾಲನಗರ, ನ 23: ಹಾರಂಗಿಯನ್ನು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಚಿಂತನೆ ಹರಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಅವರು ಹಾರಂಗಿ ಉದ್ಯಾನವನಕ್ಕೆ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಟಿಕೆಟ್ ಕೌಂಟರ್ಗೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆದ್ಯತೆ ಕಲ್ಪಿಸುವುದರೊಂದಿಗೆ ಪ್ರವಾಸಿಗರಿಗೆ ಉತ್ತಮ ಸೇವೆ ನೀಡಲು ಚಿಂತನೆ ಹರಿಸಲಾಗಿದೆ ಎಂದರು. ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸರಕಾರ ಕ್ರಮಕೈಗೊಳ್ಳಲಿದೆ ಎಂದರು. ಈ ಸಂದರ್ಭ ಮಾತನಾಡಿದ ಅವರು ಹಾರಂಗಿ ಹೂಳೆತ್ತುವುದು ಮತ್ತು ನದಿ ಪಾತ್ರದ ಅಭಿವೃದ್ಧಿಗೆ ರೂ 130 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಇದರಲ್ಲಿ ಹೂಳೆತ್ತಲು ರೂ 38 ಕೋಟಿ, ತಡೆಗೋಡೆ ನಿರ್ಮಾಣಕ್ಕೆ 41 ಕೋಟಿ ಉಳಿದಂತೆ ನದಿ ಸಂರಕ್ಷಣೆ ಮತ್ತು ಜಲಾಶಯಕ್ಕೆ ಹರಿದು ಬರುವ ನೀರಿನ ವೇಗ ನಿಯಂತ್ರಿಸಲು ಹಾಗೂ ಉಪ ನದಿಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ ರೂ 100 ಕೋಟಿ ಕ್ರಿಯಾ ಯೋಜನೆಯೊಂದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಶಾಸಕ ಅಪ್ಪಚ್ಚುರಂಜನ್, ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದರು. ಈ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯ ಗಣೇಶ್, ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ, ಸಹಾಯಕ ಅಭಿಯಂತರ ನಾಗರಾಜ್,ಡಿವೈಎಸ್ಪಿ ಶೈಲೇಂದ್ರ ವೃತ್ತ ನಿರೀಕ್ಷಕ ಮಹೇಶ್, ಬಿಜೆಪಿ ವಕ್ತಾರ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಕುಡಾ ಸದಸ್ಯ ವಿ.ಡಿ.ಪುಂಡರೀಕಾಕ್ಷ, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಸ್ಥಳೀಯ ಪ್ರಮುಖರಾದ ಭಾಸ್ಕರ್ ನಾಯಕ್ ಮತ್ತಿತರರು ಇದ್ದರು.