ಕುಶಾಲನಗರ, ನ. 23: ನದಿಯಲ್ಲಿ ಶೇಖರಣೆಯಾಗಿರುವ ಮರಳು ಮಿಶ್ರಿತ ಮಣ್ಣನ್ನು ತೆಗೆದು ನದಿಯನ್ನು ಅಗಲಗೊಳಿಸುವುದು, ನದಿ ಸಂರಕ್ಷಣೆ ಹಾಗೂ ಕುಸಿತಗೊಂಡಿರುವ ಭಾಗಗಳಲ್ಲಿ ತಡೆಗೋಡೆ ನಿರ್ಮಾಣ, ಜೊತೆಗೆ ಜಲಾನಯನ ಪ್ರದೇಶಗಳಾದ ಹಾಡಗೇರಿ, ಹಮ್ಮಿಯಾಲ, ತಂತಿಪಾಲ, ಮಕ್ಕಂದೂರು ವ್ಯಾಪ್ತಿಯಲ್ಲಿ ಕುಸಿತಗೊಂಡಿರುವ ಭಾಗಗಳ ಅಭಿವೃದ್ಧಿ ನಡೆಸಲು ಯೋಜನೆಯಲ್ಲಿ ಕಲ್ಪಿಸಲಾಗಿದೆ.
ಈ ಎಲ್ಲಾ ಪ್ರದೇಶಗಳನ್ನು ಪರಿಶೀಲಿಸಿ ತಂತ್ರಜ್ಞರು ಸೂಚಿಸಿದ ಪ್ರದೇಶಗಳಲ್ಲಿ ವಿನ್ಯಾಸಗಳಿಗೆ ಅನುಗುಣವಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಹೂಳು ತೆಗೆಯುವ ಕಾಮಗಾರಿಗೆ ರೂ 31.36 ಕೋಟಿ ಅನುದಾನ ಕಲ್ಪಿಸಲಾಗಿದ್ದು ಈ ಬಗ್ಗೆ ಈಗಾಗಲೆ ಸರ್ವೆ ಕಾರ್ಯ ಮುಗಿದಿದೆ. ಹಾರಂಗಿ ಅಣೆಕಟ್ಟೆಯ ಒಳಭಾಗದಲ್ಲಿ 34.993 ಮಿಲಿಯನ್ ಘನ ಮೀಟರ್ ಹೂಳು ತುಂಬಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಡ್ರೋನ್ ಕ್ಯಾಮರ ಮೂಲಕ ಸರ್ವೆ ಮಾಡಲಾಗಿದ್ದು ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹಾರಂಗಿ ಅಣೆಕಟ್ಟೆ ಯೋಜನೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಶಕ್ತಿಗೆ ಮಾಹಿತಿ ನೀಡಿದ್ದಾರೆ. ಹಾರಂಗಿ ಅಣೆಕಟ್ಟೆ ಸಾಮಥ್ರ್ಯ 8.5 ಟಿಎಂಸಿ ಇದ್ದು 1.25 ಟಿಎಂಸಿ ನೀರಿನ ಶೇಖರಣೆ ಕ್ಷೀಣಗೊಂಡಿರುವುದು ಸರ್ವೆ ಕಾರ್ಯ ನಡೆಸಿದ ಸಂದರ್ಭ ಖಚಿತಗೊಂಡಿದೆ.
ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ನದಿ ಪಾತ್ರದ ಅಭಿವೃದ್ಧಿ ಕಾಮಗಾರಿಗೆ ರೂ 34.82 ಕೋಟಿ ಮೀಸಲಿರಿಸಲಾಗಿದ್ದು ನದಿಯ ಬಲಭಾಗ, ಎಡಭಾಗಗಳಲ್ಲಿ ಗುಡ್ಡ ಕುಸಿತ, ನದಿ ಕೊರೆತ ತಪ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ತಡೆಗೋಡೆ ನಿರ್ಮಾಣ ನದಿ ಪಾತ್ರದಲ್ಲಿ ಶೇಖರಣೆಯಾಗಿರುವ ಮಣ್ಣನ್ನು ತೆಗೆಯುವ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ನದಿಗಳಾದ ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ಮತ್ತು ಉಪನದಿಗಳ ಅಕ್ಕಪಕ್ಕದ ಗುಡ್ಡೆಗಳು ಕುಸಿತಗೊಂಡಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ಮೂಲಕ ಹಾರಂಗಿ ಜಲಾಶಯದಲ್ಲಿ ನೀರಿನ ಸಮರ್ಪಕ ಸಂಗ್ರಹ ಹಾಗೂ ನದಿ ಪಾತ್ರದ ಗ್ರಾಮಗಳ ಪ್ರವಾಹವನ್ನು ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.